ಪೆರ್ಡೂರು: "ಹಿಂದೂಗಳ ಶ್ರದ್ಧಾಕೇಂದ್ರಗಳ ಮೇಲೆ, ನಮ್ಮ ಭಾವನೆಗಳ ಮೇಲೆ ಆಗುವ ಹಾನಿಯನ್ನು ಹಿಂದೂ ಸಮಾಜ ಎಂದಿಗೂ ಸಹಿಸುವುದಿಲ್ಲ. ನಾವು ನಂಬುವ ದೈವ ದೇವರುಗಳನ್ನು ಪ್ರಾರ್ಥಿಸಿದರೆ ನೀವುಗಳು ಪಾಕಿಸ್ತಾನಕ್ಕೆ ಹೋಗಬೇಕಾದ ದಿನ ಬರುತ್ತದೆ" ಎಂದು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಗುಡುಗಿದ್ದಾರೆ.
ಪೆರ್ಡೂರಿನಲ್ಲಿ ನಡೆದ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ನಡೆದ ಲವ್ ಜಿಹಾದ್ ವಿರುದ್ದದ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ಸ್ವಾಮೀಜಿ, "ಪೆರ್ಡೂರಿನಲ್ಲಿ ಘಟನೆ ನಡೆದ ಬೆನ್ನಿಗೇ ರಾಜ್ಯ ಸರಕಾರ, ಲವ್ ಜಿಹಾದ್ ನಿಷೇಧಿಸುವ ಕಾನೂನು ತರುವ ದಿಟ್ಟ ನಿರ್ಧಾರ ಮಾಡಿತು. ಇದಕ್ಕಾಗಿ ನಾವು ಸರಕಾರಕ್ಕೆ ಧನ್ಯವಾದ ಸಲ್ಲಿಸಬೇಕು. ಇನ್ನು ಮುಂದೆ ನೀವು ಕಾನೂನಿನ ಕುಣಿಕೆಯಲ್ಲಿ ಬರುತ್ತೀರಿ. ಲವ್ ಜಿಹಾದ್ ನಾವು ಮಟ್ಟ ಹಾಕಲೇಬೇಕು. ಹಲವಾರು ಪ್ರಕರಣಗಳಲ್ಲಿ ನಾವು ನಮ್ಮ ಹೆಣ್ಣು ಮಕ್ಕಳನ್ನು ಕಳೆದು ಕೊಂಡಿದ್ದೇವೆ. ಎಲ್ಲದಕ್ಕೂ ಕಾನೂನು ಇದೆ ಎನ್ನುತ್ತೀರಿ, ಆದರೆ, ಕಾನೂನು ಎಂದಿಗೂ ಹಿಂದೂ ಸಮಾಜಕ್ಕೆ ಒಳ್ಳೆಯತನವನ್ನು ತೋರಿಸಿಲ್ಲ. ಈ ಪರಿಸ್ಥಿತಿಯನ್ನು ಮೆಟ್ಟಿ ನಿಲ್ಲಲು ನಾವು ದೇವರ ಮೊರೆ ಹೋಗಲೇ ಬೇಕು. ನಮ್ಮ ತಾಯಿಯ ಮೇಲೆ ಕೆಟ್ಟ ದೃಷ್ಟಿ ಬೀರುವವನ ದೃಷ್ಟಿ ಇಲ್ಲದ ಹಾಗೆ ಆಗಬೇಕು ಎಂದು ನಾವು ಪ್ರಾರ್ಥನೆ ಮಾಡಬೇಕು. ಹಿಂದೂಗಳ ಚಿಂತನಾ ಸಭೆಗಳಿಗೆ ವಿರೋಧ ಸಭೆ ಎಂದು ಹೇಳಿ ಅವಕಾಶ ನೀಡುತ್ತಿಲ್ಲ. ನಿಮ್ಮ ಮನೆಯ ಮಗಳು ಹೋದರೂ ಕೊನೆಗೆ ನಾವೇ ಹೋರಾಟ ಮಾಡಬೇಕು. ಹಿಂದೂ ಸಮಾಜ ಸೆಟೆದು ನಿಲ್ಲಬೇಕು. ಮುಂದಿನ ದಿನಗಳಲ್ಲಿ ದೇಶಾದ್ಯಂತ ಎಲ್ಲಿಯಾದರೂ ಇಂತಹ ಪ್ರಕರಣಗಳು ನಡೆದರೆ ಅದರ ಮುಂದಿನ ಸ್ಥಿತಿ ಏನಾಗುತ್ತದೆ ಎಂದು ನೀವೇ ಊಹಿಸಿಕೊಳ್ಳಿ. ನಮಗೆ ಬೇಕಾದಷ್ಟು ಶಕ್ತಿ ಕೇಂದ್ರಗಳಿವೆ. ಆ ಎಲ್ಲಾ ಶಕ್ತಿ ಕೇಂದ್ರಗಳಿಗೆ ನಾವು ಮೊರೆ ಹೋದರೆ ನಿಮ್ಮ ಪರಿಸ್ಥಿತಿ ಪಾಕಿಸ್ತಾನಕ್ಕೇ ಹೋಗಬೇಕಾಗುತ್ತದೆ" ಎಂದರು.
ಸಭೆಯಲ್ಲಿ ಮಾತೃ ಸಂಘದ ಪ್ರಮುಖರಾದ ಪೂರ್ಣಿಮಾ ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ವಿಶ್ವ ಹಿಂದೂ ಪರಿಷತ್ ನ ದಿನೇಶ್ ಮೆಂಡನ್, ಕಾಪು ಶಾಸಕ ಲಾಲಾಜಿ ಮೆಂಡನ್ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
09/11/2020 01:33 pm