ಉಡುಪಿ: ಜಿಲ್ಲೆಯ ಬಸ್ರೂರು ಪ್ರದೇಶ ಗತ ಇತಿಹಾಸ ತನ್ನ ಮಡಿಲಲ್ಲಿ ಬಚ್ಚಿಟ್ಟುಕೊಂಡಿರುವ ಊರು ಎಂದರೆ ತಪ್ಪಾಗಲಾರದು. ಇಂದಿಗೂ ಇಲ್ಲಿ ರಾಜ-ಮಹಾರಾಜರ ಆಳ್ವಿಕೆಯ ಕುರುಹು ನೋಡಬಹುದು. ವಿಜಯನಗರ ಕಾಲದ ಮುಖ್ಯ ಬಂದರಾಗಿದ್ದ ಬಸ್ರೂರಿನ ಬಹುತೇಕ ದೇವಾಲಯಗಳು ಇಂದು ಸೂಕ್ತ ವ್ಯವಸ್ಥೆ, ನಿರ್ವಹಣೆ ಇಲ್ಲದೆ ಸೊರಗಿದೆ.
ಬಸ್ರೂರು ಇತಿಹಾಸದಲ್ಲಿ ಗತ ವೈಭವ ಕಂಡ ಸ್ಥಳ. ವಿಜಯನಗರ ಸಾಮ್ರಾಜ್ಯದ ಬಾರಕೂರು ರಾಜ್ಯವಾಗಿರುವ ಕಾಲದಲ್ಲಿ ಮುಖ್ಯ ವ್ಯಾಪಾರದ ಕೇಂದ್ರ ಬಿಂದು ಬಸ್ರೂರು. ಸುಮಾರು ಒಂದು ಸಾವಿರ ವರ್ಷಗಳ ಕಾಲ ಸುಭದ್ರವಾಗಿ ಆಳ್ವಿಕೆ ನಡೆಸಿದ ಕರಾವಳಿಯ ಪ್ರಸಿದ್ಧ ಮನೆತನ ಆಳುಪ ಮನೆತನದ ನೆಲೆವೀಡು ಈ ಬಸ್ರೂರು ಎಂದರೆ ತಪ್ಪಾಗಲಾರದು. ಇಲ್ಲಿನ ಶಿಲ್ಪ ಕಲೆ ಸಹ ಅನೇಕ ವರ್ಷಗಳ ಹಿಂದಿನ ಇತಿಹಾಸ ಹೊಂದಿದೆ. ಹೊಯ್ಸಳ, ವಿಜಯನಗರದ ಶಿಲ್ಪಕಲೆ ಬಹು ಹೆಚ್ಚಾಗಿ ಈ ಭಾಗದಲ್ಲಿ ಕಂಡು ಬರುತ್ತದೆ. ಶ್ರೀ ಆಂಜನೇಯ, ಶ್ರೀ ಗಜಲಕ್ಷ್ಮೀ, ಶ್ರೀ ಗರುಡ, ಶ್ರೀ ಉಮಾ ಮಹೇಶ್ವರಿ, ಶ್ರೀ ವೆಂಕಟರಮಣ ದೇವರ ಶಿಲ್ಪಕಲೆ ಕೂಡ ಅತಿ ವಿಶೇಷ ಕೆತ್ತನೆಯಿಂದ ಕೂಡಿದೆ.
ಬಸ್ರೂರಿನ ಶ್ರೀ ತಿರುಮಲ ವೆಂಕಟರಮಣ ದೇವಾಲಯದ ಹೊರ ಪೌಳಿಯಲ್ಲಿ ಕಾಣಲ್ಪಡುವ, ಕಂಚಿನ ಕಂಬದ ಶಿಲ್ಪಕಲೆ ಕೂಡಾ ಬಹು ವಿಶೇಷತೆಯಿಂದ ಕೂಡಿದೆ. ಮೊದಲನೆ ಹಂತದ ಸ್ವಚ್ಛತೆ ಕಾರ್ಯಕ್ರಮ ಅಂಗವಾಗಿ ಯುವ ಬ್ರಿಗೇಡ್ ತಂಡ ಶ್ರೀ ತಿರುಮಲ ವೆಂಕಟರಮಣ ದೇವಾಲಯ ಸ್ವಚ್ಛಗೊಳಿಸಿದೆ. ಮುಖ್ಯವಾಗಿ ದೇವಸ್ಥಾನದ ಮುಂಭಾಗದಲ್ಲಿರುವ ಕಂಚಿನ ಗರುಡ ಕಂಬ ಬಲು ವಿಶೇಷತೆಯಿಂದ ಕೂಡಿದ್ದು, ಸ್ಥಳೀಯ ಯುವಕರು ಮತ್ತು ಯುವ ಬ್ರಿಗೇಡ್ ಕಾರ್ಯಕರ್ತರು ಅತಿ ನಾಜೂಕಾಗಿ ಈ ಸ್ವಚ್ಛತಾ ಕಾರ್ಯ ನಡೆಸಿದರು.
Kshetra Samachara
29/10/2020 05:26 pm