ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನಡೆಯುವ ನವರಾತ್ರಿ ಉತ್ಸವಕ್ಕಾಗಿ ದೇಗುಲದ ಆಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.
ಕೊರೊನಾದ ಈ ಸಮಯದಲ್ಲಿ ಈ ಬಾರಿಯ ಉತ್ಸವಕ್ಕಾಗಿ ಬರುವ ಭಕ್ತರು ಕೊರೊನಾ ನಿಯಮಾವಳಿ ಕಡ್ಡಾಯವಾಗಿ ಪಾಲಿಸಬೇಕು ಎಂದು ಆಡಳಿತ ಮಂಡಳಿ ಹೇಳಿದೆ.
ಅ.17 ರಿಂದ ಪ್ರಾರಂಭಗೊಳ್ಳುವ ನವರಾತ್ರಿಯ ಉತ್ಸವ ಆಚರಣೆ ಅ.25 ರ ವರೆಗೂ ನಡೆಯಲಿದೆ. ನವರಾತ್ರಿಯ ಅಂಗವಾಗಿ ದೇವಸ್ಥಾನದಲ್ಲಿ ದಿನಂಪ್ರತಿ ನಡೆಯುವ ಪೂಜೆಗಳ ಜೊತೆಯಲ್ಲಿ ನವರಾತ್ರಿಯ ವಿಶೇಷ ಪೂಜೆ ಹಾಗೂ ಉತ್ಸವ ನಡೆಯಲಿದೆ.
ಅ.24 ರಂದು ಸೋಮವಾರ ಮಹಾ ನವಮಿ ಪ್ರಯುಕ್ತ ಬೆಳಿಗ್ಗೆ 11.30 ಕ್ಕೆ ಚಂಡಿಕಾಯಾಗ ಹಾಗೂ ರಾತ್ರಿ 10.30 ಕ್ಕೆ ರಥೋತ್ಸವ ಜರುಗಲಿದೆ.
ಅ.25 ರಂದು ಭಾನುವಾರ ವಿಜಯದಶಮಿಯ ಪ್ರಯುಕ್ತ ಬೆಳಿಗ್ಗೆ ವಿದ್ಯಾರಂಭ, ನವಾನ್ನ ಪ್ರಾಶನ ಹಾಗೂ ಶ್ರೀ ಮೂಕಾಂಬಿಕಾ ದೇವಿಯ ವಿಜಯೋತ್ಸವ ನಡೆಯಲಿದೆ. ಈ ಹಿಂದೆ ನವರಾತ್ರಿಯ ಉತ್ಸವ ಆಚರಣೆಯ ದಿನಗಳಲ್ಲಿ ಪ್ರತಿ ದಿನ ಅಪರಾಹ್ನ 3.00 ರಿಂದ ರಾತ್ರಿ 11ರ ವರೆಗೆ ದೇಶದ ವಿವಿಧ ಭಾಗದ ಕಲಾ ತಂಡಗಳಿಂದ ಸೇವಾರೂಪವಾಗಿ ಶ್ರೀ ದೇವಳದ ಸ್ವರ್ಣಮುಖಿ ರಂಗಮಂದಿರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದ್ದವು. ಆದರೆ, ಈ ಬಾರಿ ಕೋವಿಡ್ ನಿಯಮಾವಳಿ ಪಾಲನೆ ಕಡ್ಡಾಯವಾಗಿರುವುದರಿಂದ ಯಾವುದೆ ಕಲಾ ತಂಡಗಳಿಗೂ ಕಲಾ ಸೇವೆಗೆ ಅವಕಾಶ ನೀಡಿಲ್ಲ.
Kshetra Samachara
16/10/2020 01:10 pm