ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಮಟಾ ಬಳಿಯ ಕಾಗಾಲ ಗ್ರಾಮದಲ್ಲಿ 15-16ನೇ ಶತಮಾನದ ಶಾಸನ ಪತ್ತೆ

ಕುಮಟಾ ತಾಲ್ಲೂಕಿನ ಬಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಗಾಲ ಗ್ರಾಮದ ಮಹಾದೇವಿ ಮಹಾದೇವ ಪಟಗಾರ್ ಇವರಿಗೆ ಸೇರಿದ ತೋಟದಲ್ಲಿ ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಶಾಸನವೊಂದು ಪತ್ತೆಯಾಗಿದ್ದು, 4 ಅಡಿ ಎತ್ತರ ಹಾಗೂ 2 ಅಡಿ ಅಗಲವನ್ನು ಹೊಂದಿರುವ ಈ ಶಾಸನವು, 33 ಸಾಲುಗಳನ್ನು ಹೊಂದಿದ್ದು, ಕನ್ನಡ ಮತ್ತು ತಿಗಳಾರಿ ಲಿಪಿಯಲ್ಲಿದೆ. ಶಾಸನವನ್ನು ಅಧ್ಯಯನ ಮಾಡಿರುವ ಸರ್ಕಾರಿ ಪ್ರಥಮದರ್ಜೆ ಕಾಲೇಜು ಬಾಡದ ಇತಿಹಾಸ ಸಹಾಯಕ ಪ್ರಾಧ್ಯಾಪಕ ಮತ್ತು ಸಂಶೋಧನಾರ್ಥಿಯಾದ ರಹಿಮಾನ್ ಸಾಬ್ ಎಲ್ ಇವರು ಇದೊಂದು ದಾನ ಶಾಸನವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.

ಶಾಸನದಲ್ಲಿ ಕಂಡುಬರುವ ಸಾಲುಗಳ ಮಾಹಿತಿಯ ಆಧಾರದ ಮೇಲೆ ಗಜನಿ ಪ್ರದೇಶ ಹಾಗೂ ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳ ಭೂಮಿಯ ಬೆಳೆಯನ್ನು ಮತ್ತು ಅಕ್ಕಿ ಮುಡಿಯನ್ನು ವಿಶ್ವೇಶ್ವರ ಶ್ರೀಪಾದಂಗಳಿಗೆ ಮತ್ತು ಬ್ರಾಹ್ಮಣರ ಭೋಜನಕ್ಕೆ ದಾನವಾಗಿ ನೀಡಿರುವುದು ಕಂಡುಬರುತ್ತದೆ. ಶಾಸನದ ಮೇಲ್ಭಾಗ ತೃಟಿತಗೊಂಡಿರುವರಿಂದ ದಾನವನ್ನು ಯಾರು? ಯಾವ ಕಾಲದಲ್ಲಿ ನೀಡಿದರು ಎಂಬುದು ಸ್ಪಷ್ಟವಾಗಿ ತಿಳಿದು ಬರುವುದಿಲ್ಲ. ಆದರೆ ಲಿಪಿಯ ಆಧಾರದ ಮೇಲೆ ಈ ದಾನ ಶಾಸನವು 15-16ನೇ ಶತಮಾನಕ್ಕೆ (ವಿಜಯನಗರೋತ್ತರ ಕಾಲ) ಸೇರಿರಬಹುದೆಂದು ಸಂಶೋಧನಾರ್ಥಿಯು ತಿಳಿಸಿರುತ್ತಾರೆ. ಶಾಸನದ ಕೊನೆಯಲ್ಲಿ ಶಾಪಾಶಯ ವಾಕ್ಯವನ್ನು ಕಾಣಬಹುದು.

ಶಾಸನದಲ್ಲಿ ಕನ್ನಡ ಲಿಪಿಯ ಜೊತೆಗೆ ಕೆಲವೊಂದು ತಿಗಳಾರಿ ಲಿಪಿಯನ್ನು ಹೋಲುವ ಅಕ್ಷರಗಳು ಕಂಡುಬರುವುದರಿಂದ ಈ ಶಾಸನವು ಅಧ್ಯಯನದ ದೃಷ್ಠಿಯಿಂದ ಮಹತ್ವದ್ದೆನಿಸುತ್ತದೆ. ಶಾಸನವನ್ನು ಓದುವಲ್ಲಿ ಪ್ಲೀಚ್ ಇಂಡಿಯಾ ಫೌಂಡೇಶನ್ ಹೈದರಾಬಾದ್ ಇಲ್ಲಿನ ಸಹಾಯಕ ಸಂಶೋಧಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಸಹಕಾರ ನೀಡಿರುತ್ತಾರೆ. ಶಾಸನದ ಕ್ಷೇತ್ರಕಾರ್ಯ ಶೋಧನೆಯಲ್ಲಿ ಭಗೀರತ ಎಂ. ಗೌಡ ಹಾಗೂ ಭರತ್ ಪಟಗಾರ್ ಇವರು ಸಹಕಾರ ನೀಡಿರುತ್ತಾರೆ.

Edited By : PublicNext Desk
Kshetra Samachara

Kshetra Samachara

13/10/2022 12:02 pm

Cinque Terre

1.99 K

Cinque Terre

0

ಸಂಬಂಧಿತ ಸುದ್ದಿ