ತುಳುನಾಡಿಗೆ ಅನ್ಯಾಯ ಮಾಡಿದ ಯಾರನ್ನೂ ಇಷ್ಟರವರೆಗೆ ದೈವಗಳು ಬಿಟ್ಟಿಲ್ಲ. ತುಳುನಾಡಿನ ಜೀವನದಿ ನೇತ್ರಾವತಿ ನದಿ ತಿರುವು ಯೋಜನೆ ತಂದ ಸಂದರ್ಭ ಹೋರಾಟಗಾರರು ದೈವದ ಮುಂದೆ ಪ್ರಾರ್ಥಿಸಿದರು. ಈ ಯೋಜನೆ ತಂದ ಇಬ್ಬರು ರಾಜಕೀಯ ನಾಯಕರು ಈಗ ಮೂಲೆಗುಂಪಾಗಿದ್ದಾರೆ.
ಆರ್ಟಿಕಲ್ 347ರ ಪ್ರಕಾರ ತುಳುಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಅ.25ರೊಳಗೆ ಮಾಡದಿದ್ದಲ್ಲಿ ತುಳುಭಾಷಿಗರು ಎಲ್ಲಾ ದೈವಸ್ಥಾನಗಳಿಗೆ ಹೋಗಿ ಸಚಿವರುಗಳನ್ನು ದೈವಗಳು ನೋಡಲೆಂದು ಪ್ರಾರ್ಥಿಸಬೇಕು. ಜೊತೆಗೆ ನವೆಂಬರ್ 1ಕ್ಕೆ ಉಡುಪಿ, ದ.ಕ.ಜಿಲ್ಲೆ ಬಂದ್ ಗೆ ಕರೆ ಕೊಡಬೇಕು ಎಂದು ತುಳುಪರ ಹೋರಾಟಗಾರ ಸುದರ್ಶನ್ ಸುರತ್ಕಲ್ ಖಡಕ್ ಎಚ್ಚರಿಕೆ ನೀಡಿದರು.
ಅಪ್ಪೆ ಬಾಸೆ ಪೊರುಂಬಾಟ ಕೂಟ ತುಳುನಾಡು ವತಿಯಿಂದ ಮಂಗಳೂರಿನ ಕ್ಲಾಕ್ ಟವರ್ ಮುಂಭಾಗದಲ್ಲಿ 'ಅಪ್ಪೆ ಬಾಸೆ ಮಾನಾದಿಗೆಗ್ ಪ್ರತಿಭಟನೆ' ನಡೆಯಿತು. ಈ ಸಂದರ್ಭ ತುಳುಚಿತ್ರರಂಗ, ರಂಗಭೂಮಿ ನಟರು, ತುಳುಪರ ಹೋರಾಟಗಾರರು ಭಾಗವಹಿಸಿದ್ದರು.
ಪ್ರತಿಭಟನೆಯನ್ನುದ್ದೇಶಿಸಿ ತುಳು ರಂಗಭೂಮಿ ಹಾಗೂ ಸಿನಿಮಾ ನಿರ್ದೇಶಕ ವಿಜಯಕುಮಾರ್ ಕೊಡಿಯಾಲಬೈಲ್ ಮಾತನಾಡಿ, ಕನ್ನಡ ಹಾಗೂ ತುಳು ಭಾಷೆ ತುಳುಭಾಷಿಗರ ಎರಡು ಕಣ್ಣುಗಳಿದ್ದಂತೆ. ಯಾವತ್ತೂ ನಾವು ಕನ್ನಡವನ್ನು ನಿರ್ಲಕ್ಷ್ಯ ಮಾಡುವುದಿಲ್ಲ. ನಮ್ಮ ನೆಲದಲ್ಲಿ ನಾವು ತುಳುವನ್ನೇ ಬಳಸುತ್ತೇವೆ. ಕರಾವಳಿಯಲ್ಲಿ ಕನ್ನಡವನ್ನು ಕಡ್ಡಾಯ ಮಾಡಲು ಹೊರಟಿರುವ ಸಚಿವ ಸುನಿಲ್ ಕುಮಾರ್ ಕಾರ್ಕಳದಲ್ಲಿ ಕನ್ನಡದಲ್ಲೇ ಮತಯಾಚನೆ ಮಾಡಿ ಗೆದ್ದು ಬರಲಿ. ಆಗ ನಾವು ಈ ತುಳು ಹೋರಾಟವನ್ನು ಕೈಬಿಡುತ್ತೇವೆ ಎಂದು ಸವಾಲೆಸೆದರು.
ತುಳುಪರ ಹೋರಾಟಗಾರ ದಿಲ್ ರಾಜ್ ಆಳ್ವ ಮಾತನಾಡಿ, ತುಳುಭಾಷೆಯ ಉಳಿವಿಗೆ ಯಾವುದೇ ರೀತಿಯಲ್ಲಿ ಕೊಡುಗೆ ಕೊಡದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಗೆ ಮೊದಲಾಗಿ ಬೀಗ ಜಡಿಯಬೇಕು. ತುಳು 8ನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಲು ತಾಂತ್ರಿಕ ದೋಷ ಇದೆ ಎಂದು ಜನಪ್ರತಿನಿಧಿಗಳು ಹೇಳುತ್ತಿದ್ದರು.
ಆದರೆ, ಈವರೆಗೆ ಅದು ಸರಿಯಾಗಲೇ ಇಲ್ಲ. ಇಂದು ಸಚಿವ ಸುನಿಲ್ ಕುಮಾರ್ ಕರ್ನಾಟಕದಲ್ಲಿ ತುಳು ಮಾತನಾಡಲೇ ಬಾರದು. ಕನ್ನಡವನ್ನೇ ಬಳಸಬೇಕೆಂದು ಹೇಳುತ್ತಿದ್ದಾರೆ. ಈ ಮೂಲಕ ತುಳುವರನ್ನು ಕನ್ನಡಕ್ಕೆ ಮತಾಂತರ ಮಾಡುತ್ತಿದ್ದಾರೆ. ಆದ್ದರಿಂದ ತುಳು ಭಾಷೆಯನ್ನು ಅಧಿಕೃತ ಭಾಷೆ ಆಗುವವರೆಗೆ ನಾವು ಹೋರಾಟ ಕೈಬಿಡೋಲ್ಲ ಎಂದರು.
PublicNext
10/10/2022 04:59 pm