ಸುರತ್ಕಲ್: "ಎನ್ ಐಟಿಕೆ ಬಳಿಯಲ್ಲಿರುವ ಟೋಲ್ ಗೇಟ್ ಅಕ್ರಮವಾದರೆ ಅದನ್ನು ಕೇಂದ್ರ ಸರಕಾರವೇ ತೆಗೆಸಲಿ. ಅದು ಬಿಟ್ಟು ನಾವೇ ತೆಗೆದು ಬಿಸಾಡುತ್ತೇವೆ ಎಂದು ಹೋರಾಟಗಾರರ ಹೆಸರಿನಲ್ಲಿ ಬೆದರಿಕೆ ಹಾಕುತ್ತಿರುವುದು ಸರಿಯಲ್ಲ. ಒಂದು ವೇಳೆ ಟೋಲ್ ಕಿತ್ತೆಸೆದರೆ ಆಗಬಹುದಾದ ಗಲಾಟೆ, ಘರ್ಷಣೆಗೆ ಸಂಬಂಧಪಟ್ಟ ಹೋರಾಟಗಾರರು, ಟೋಲ್ ವಿರೋಧಿ ಸಂಘಟನೆಗಳೇ ನೇರ ಹೊಣೆ" ಎಂದು ಟೋಲ್ ಗೇಟ್ ವ್ಯವಸ್ಥಾಪಕ ಮುಕ್ಕ ವಲಯ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಭಾಸ್ಕರ್ ಮುಕ್ಕ ಎಚ್ಚರಿಕೆ ನೀಡಿದ್ದಾರೆ.
ಹಿಂದೆ ಆಂಧ್ರದವರು, ಹೊರಗಿನವರು ಇಲ್ಲಿ ಟೋಲ್ ಗೇಟ್ ಗುತ್ತಿಗೆ ಪಡೆದಿದ್ದಾಗ ಇವರ ಹೋರಾಟ ಇರಲಿಲ್ಲ. ಈಗ ಸ್ಥಳೀಯರೇ ಇಲ್ಲಿ ಕೆಲಸ ಮಾಡುತ್ತಿರುವಾಗ ಹೋರಾಟ ನಡೆಯುತ್ತಿದೆ. ಕಾಂಗ್ರೆಸ್ ಮುಖಂಡ ವಿನಯ ಕುಮಾರ್ ಸೊರಕೆ ಟೋಲ್ ಕಿತ್ತೆಸೆಯಲು ಕರೆ ನೀಡಿದ್ದಾರೆ. ಆದರೆ ಅದಕ್ಕೂ ಮುನ್ನ ಈ ಟೋಲ್ ಆಗಿದ್ದು ಯಾರಿಂದ ಎಂದು ಅವರು ತಿಳಿದುಕೊಳ್ಳಲಿ" ಎಂದರು.
ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಂಡಿಸ್ ಸಚಿವರಾಗಿದ್ದ ವೇಳೆಯಲ್ಲಿ ಸುರತ್ಕಲ್ ನಲ್ಲಿ ಟೋಲ್ ಪ್ರಾರಂಭ ಮಾಡಲು ಯೋಜನೆ ರೂಪಿಸಲಾಗಿದೆ. ಇದು ಕಾಂಗ್ರೆಸಿಗರಿಗೂ ತಿಳಿದಿದೆ. ಹೀಗಿದ್ದರೂ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತದಲ್ಲಿ ಇರುವಾಗ ಟೋಲ್ ಬಂದ್ ಮಾಡಿಸುವ ಹೋರಾಟ ಯಾಕೆ? ಕೇಂದ್ರ ಸರಕಾರವೇ ಟೋಲ್ ತೆಗೆಯಲಿ, ನಮಗೇನು ಅಭ್ಯಂತರವಿಲ್ಲ. ಆದರೆ ಟೋಲ್ ವಿಚಾರದಲ್ಲಿ ರಾಜಕೀಯ, ಗಲಭೆ ನಡೆಸುವ ಸಂಚು ಸರಿಯಲ್ಲ ಎಂದು ಭಾಸ್ಕರ್ ಹೇಳಿದ್ದಾರೆ.
Kshetra Samachara
03/10/2022 07:09 pm