ಮುಲ್ಕಿ: ಸುಮಾರು 10 ಕೋಟಿ ವೆಚ್ಚದಲ್ಲಿ ಮುಲ್ಕಿಯ ಕಾರ್ನಾಡ್ ಗೇರುಕಟ್ಟೆ ಬಳಿ ನಿರ್ಮಾಣಗೊಳ್ಳಲಿರುವ ಮುಲ್ಕಿ ತಾಲೂಕು ಆಡಳಿತ ಸೌಧವನ್ನು ಆ.27ರಂದು ವಸತಿ ಸಚಿವ ವಿ. ಸೋಮಣ್ಣ ಅವರು ಶಿಲಾನ್ಯಾಸ ನೆರವೇರಿಸಲಿದ್ದಾರೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಕಿನ್ನಿಗೋಳಿಯ ಯುಗಪುರುಷದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಮುಲ್ಕಿ ತಾಲ್ಲೂಕಿನಲ್ಲಿ ಶಾಸಕರ ಕಚೇರಿ, ತಹಶೀಲ್ದಾರ್, ಸರ್ವೇಯರ್ ಸಹಿತ 27ವಿವಿಧ ಇಲಾಖೆಯ ಕಚೇರಿಗಳನ್ನೊಳಗೊಂಡ ಮುಲ್ಕಿಯ ಆಡಳಿತ ಸೌಧವನ್ನು ಮುಂದಿನ 1.5 ವರ್ಷದಲ್ಲಿ ನಿರ್ಮಿಸಲಾಗುವುದು ಎಂದರು. ಮುಲ್ಕಿಯ ಕಾರ್ನಾಡ್ ಬೈಪಾಸ್‌ನಲ್ಲಿ 3 ಕೋ.ರೂ.ಮತ್ತು ಮೂಡಬಿದಿರೆಯಲ್ಲಿ 4 ಕೋ.ರೂ. ವೆಚ್ಚದ ಪ್ರವಾಸಿ ಮಂದಿರಕ್ಕೆ ಶಿಲಾನ್ಯಾಸ ಹಾಗೂ ಸುಮಾರು 5 ಕೋಟಿ ವೆಚ್ಚದ ಮೂಡಬಿದಿರೆಯ ಚತುಷ್ಪಥ ರಸ್ತೆಗೆ ಶಿಲಾನ್ಯಾಸವನ್ನುಇದೇ ಸಂದರ್ಭದಲ್ಲಿ ರಾಜ್ಯ ಲೋಕೋಪಯೋಗಿ ಇಲಾಖೆಯ ಸಚಿವ ಸಿ.ಸಿ.ಪಾಟಿಲ್ ನೆರವೇರಿಸಲಿದ್ದಾರೆ ಎಂದರು.
ಮುಲ್ಕಿ ಇತಿಹಾಸದಲ್ಲಿಯೇ ವಿನೂತನ ಕಾರ್ಯಕ್ರಮವಾಗಿ ಚರಿತ್ರೆಗೆ ಸೇರುವುದರಿಂದ ತಾಲ್ಲೂಕಿನಿಂದ ಸುಮಾರು 2,000 ಮಂದಿ ಗ್ರಾಮ ಗ್ರಾಮದಿಂದ ಜನರು ಭಾಗವಹಿಸಲಿದ್ದು ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಆಡಳಿತ ಸೌಧ ಕೇಂದ್ರ ಬಿಂದುವಾಗಲಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮಂಗಳೂರಿನ ಎನ್ಎಂಪಿಟಿಯಲ್ಲಿನ ವಿವಿಧ ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಲು ಸೆ.2ರಂದು ಅಗಮಿಸಲಿದ್ದು, ಕೂಳೂರಿನಲ್ಲಿ ನಡೆಯುವ ಬೃಹತ್ ಬಿಜೆಪಿ ಕಾರ್ಯಕರ್ತರ ಸಮಾವೇಶಕ್ಕೆ ಮೂಲ್ಕಿ-ಮೂಡಬಿದಿರೆಯಿಂದ ಸುಮಾರು 15 ಸಾವಿರ ಮಂದಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಶಾಸಕರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಡಲಾಧ್ಯಕ್ಷ ಸುನಿಲ್ ಆಳ್ವ, ಈಶ್ವರ ಕಟೀಲು, ಕಸ್ತೂರಿ ಪಂಜ, ಸುಕೇಶ್ ಶೆಟ್ಟಿ ಶಿರ್ತಾಡಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
23/08/2022 03:20 pm