ವಿಜಯಪುರ:ನೈಋತ್ಯ ರೈಲ್ವೆ ವಿಜಯಪುರ- ಮಂಗಳೂರು ಜಂಕ್ಷನ್-ವಿಜಯಪುರ ಎಕ್ಸ್‌ಪ್ರೆಸ್ ನಡುವಿನ ರೈಲು ಸಂಚಾರವನ್ನು ಪುನಃ ಆರಂಭಿಸಲು ತೀರ್ಮಾನಿಸಿದೆ. ನವೆಂಬರ್ 1 ರಿಂದ ಪ್ರತಿದಿನ ಈ ರೈಲು ಸಂಚಾರ ನಡೆಸಲಿವೆ. ವಿಜಯಪುರ-ಮಂಗಳೂರು ಜಂಕ್ಷನ್ ಪ್ರತಿದಿನದ ರೈಲಿನ ವೇಳಾಪಟ್ಟಿಯನ್ನು ಬದಲಾವಣೆ ಮಾಡಬೇಕು ಎಂಬ ಒತ್ತಾಯ ಹೆಚ್ಚಾಗಿತ್ತು. ಆದರೆ ಹಿಂದಿನ ವೇಳಾಪಟ್ಟಿಯ ಅನ್ವಯವೇ ರೈಲು ಸಂಚಾರ ನಡೆಸಲಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ರೈಲ್ವೆ ಇಲಾಖೆಗೆ ರೈಲಿನ ವೇಳಾಪಟ್ಟಿ ಬದಲಾವಣೆ ಮಾಡಬೇಕು ಎಂದು ಒತ್ತಾಯಿಸಿದ್ದರು. ರೈಲು ಮಂಗಳೂರು ಜಂಕ್ಷನ್‌ಗೆ 12.40ರ ಬದಲು ಬೆಳಗ್ಗೆ 9 ಗಂಟೆಗೆ ಬರುವಂತೆ ಮತ್ತು ಸಂಜೆ 4.30ರ ಬದಲು 5.30ಕ್ಕೆ ಹೊರಡುವಂತೆ ವೇಳಾಪಟ್ಟಿ ಬದಲಿಸಲು ಕೋರಿದ್ದರು.
ರೈಲಿನ ವೇಳಾಪಟ್ಟಿಯಿಂದಾಗಿ ಜನರಿಗೆ ಅನುಕೂಲವಾಗುತ್ತಿಲ್ಲ. ರೈಲು ಮಧ್ಯಾಹ್ನ ಆಗಮಿಸಿದರೆ ಕಚೇರಿ ಕೆಲಸಕ್ಕಾಗಿ ಜನರು ರೈಲಿನಲ್ಲಿ ಬರುವುದಿಲ್ಲ. ರೈಲು ಸಂಜೆ 5 ಗಂಟೆ ಬಳಿಕ ಹೊರಟರೆ ದಿನನಿತ್ಯ ಪ್ರಯಾಣ ಮಾಡುವ ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದರು.
ಆದರೆ ವೇಳಾಪಟ್ಟಿ ಬದಲಾದರೆ ಮಂಗಳೂರು ಜಂಕ್ಷನ್‌ನಲ್ಲಿ ಫ್ಲಾಟ್‌ಫಾರಂ ನೀಡಲು ತೊಂದರೆಯಾಗಲಿದೆ ಎಂದು ಅಧಿಕಾರಿಗಳು ನೈಋತ್ಯ ರೈಲ್ವೆಗೆ ತಿಳಿಸಿದ್ದರು. ಆದ್ದರಿಂದ ಹಿಂದಿನ ವೇಳಾಪಟ್ಟಿಯಲ್ಲಿಯೇ ರೈಲು ಸಂಚಾರ ನಡೆಸಲಿದೆ.
ವಿಜಯಪುರ-ಮಂಗಳೂರು ಜಂಕ್ಷನ್-ವಿಜಯಪುರ ಎಕ್ಸ್‌ಪ್ರೆಸ್ ಪ್ರತಿದಿನದ ರೈಲು ಕರಾವಳಿ ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸಲಿದೆ. ನವೆಂಬರ್ 1 ರಿಂದ ಹಿಂದಿನ ವೇಳಾಪಟ್ಟಿಯಂತೆಯೇ ರೈಲು ಸಂಚಾರ ನಡೆಸಲಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ. ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಈ ರೈಲು ಸಂಚಾರ ರದ್ದುಗೊಳಿಸಲಾಗಿತ್ತು. ಈಗ ಪುನಃ ರೈಲು ಸೇವೆ ಆರಂಭಿಸಲಾಗುತ್ತಿದೆ.
ನೈಋತ್ಯ ರೈಲ್ವೆ ಮಾಹಿತಿ ಪ್ರಕಾರ ರೈಲು ನಂಬರ್ 07327 ವಿಜಯಪುರಿಂದ ಸಂಜೆ 6 ಗಂಟೆಗೆ ಹೊರಡಲಿದೆ. ಮಂಗಳೂರು ಜಂಕ್ಷನ್ ನಿಲ್ದಾಣವನ್ನು ಮಧ್ಯಾಹ್ನ 12.40ಕ್ಕೆ ತಲುಪಲಿದೆ. ನವೆಂಬರ್ 1 ರಿಂದ ರೈಲು ಸಂಚಾರ ನಡೆಸಲಿದೆ.
ವಿಜಯಪುರಿಂದ ಹೊರಡುವ ರೈಲು ಬಾಗಲಕೋಟೆ (7.46), ಗದಗ (10.30), ಹುಬ್ಬಳ್ಳಿ (11.45), ಕರ್ಜಗಿ (1.20), ಸಕಲೇಶಪುರ (ಬೆಳಗ್ಗೆ 7.30), ಸುಬ್ರಮಣ್ಯ ರೋಡ್ (10.25), ಕಬಕ ಪುತ್ತೂರು (11.12), ಬಂಟ್ವಾಳ (11.42), ಮಂಗಳೂರು ಜಂಕ್ಷನ್ (ಮಧ್ಯಾಹ್ನ 12.40)ಕ್ಕೆ ತಲುಪಲಿದೆ.
ಮಂಗಳೂರು ಜಂಕ್ಷನ್‌ನಿಂದ ನವೆಂಬರ್ 2ರಂದು ರೈಲು ನಂಬರ್ 07328 ಸಂಜೆ 4.30ಕ್ಕೆ ಹೊರಡಲಿದೆ. ಬಂಟ್ವಾಳ (5.07), ಕಬಕ ಪುತ್ತೂರು (5.35), ಸುಬ್ರಮಣ್ಯ ರೋಡ್ (6.30), ಸಕಲೇಶಪುರ (ರಾತ್ರಿ 9 ಗಂಟೆ), ಕರ್ಜಗಿ (ಮುಂಜಾನೆ 3.18), ಹುಬ್ಬಳ್ಳಿ (5.15), ಗದಗ (6.55), ಬಾಗಲಕೋಟೆ (ಬೆಳಗ್ಗೆ 9 ಗಂಟೆ) ಮೂಲಕ ಸಾಗಿ 11.45ಕ್ಕೆ ವಿಜಯಪುರ ತಲುಪಲಿದೆ.
ವಿಜಯಪುರ-ಮಂಗಳೂರು ಜಂಕ್ಷನ್-ವಿಜಯಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ 5 ಜನರಲ್ ಸೆಕೆಂಡ್ ಕ್ಲಾಸ್, 6 ಸೆಕೆಂಡ್ ಕ್ಲಾಸ್ ಸ್ಪೀಪರ್, 1 ಎಸಿ 3 ಟೈರ್ ಮತ್ತು 1 ಲಗೇಜ್ ಕಮ್ ಬ್ರೇಕ್ ವ್ಯಾನ್ ಸೇರಿದಂತೆ 14 ಬೋಗಿ ಇರಲಿದೆ.
Kshetra Samachara
28/10/2021 10:16 am