ಪುತ್ತೂರು: ಪುತ್ತೂರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಬ್ಯಾಂಕಿನ ನೂತನ ಕಟ್ಟಡ "ರೈತ ಸೌಧ" ದ ಉದ್ಘಾಟನೆ ಇಂದು (ಸೆ. 24) ನಡೆಯಿತು. ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಕಟ್ಟಡವನ್ನು ಲೋಕಾರ್ಪಣೆಗೊಳಿಸಿದರು.
ಬಳಿಕ ಮಾತನಾಡಿದ ಸಂಸದರು, ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರಕಾರ ಕೃಷಿಕರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಕೈಗೊಂಡಿದೆ. ಇಡೀ ಜಗತ್ತು ಆರ್ಥಿಕ ಹಿಂಜರಿತದ ದುಷ್ಪರಿಣಾಮ ಎದುರಿಸುತ್ತಿದ್ದ ಸಂದರ್ಭದಲ್ಲೂ ಭಾರತದ ಆರ್ಥಿಕತೆ ಸಮತೋಲನದಲ್ಲಿರುವಂತೆ ಮಾಡಿರುವುದರ ಹಿಂದೆ ಸಹಕಾರಿ ಬ್ಯಾಂಕ್ ಗಳ ಕೊಡುಗೆಯಿದೆ ಎಂದರು.
ಇದೇ ಕಾರಣಕ್ಕಾಗಿ ಸಹಕಾರಿ ವಲಯವನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಹಕಾರಿ ರಂಗಕ್ಕಾಗಿಯೇ ಹೊಸ ಸಹಕಾರಿ ಸಚಿವಾಲಯ ಆರಂಭಿಸಿದ್ದು, ಗೃಹಸಚಿವ ಅಮಿತ್ ಶಾ ಈ ಸಚಿವಾಲಯವನ್ನು ನೋಡಿಕೊಳ್ಳುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಹಲವು ಕಾರಣಗಳಿಗಾಗಿ ಕೃಷಿಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾತ್ರ ಯಾವೊಬ್ಬ ಕೃಷಿಕನೂ ಆತ್ಮಹತ್ಯೆ ಮಾಡಿಕೊಳ್ಳದೇ ಇರಲು ಇಲ್ಲಿ ಕಾರ್ಯಾಚರಿಸುತ್ತಿರುವ ಸಹಕಾರಿ ಸಂಸ್ಥೆಗಳೇ ಕಾರಣ ಎಂದ ನಳಿನ್, ಸಹಕಾರಿ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಇಡೀ ದೇಶಕ್ಕೆ ಮಾದರಿ ಎಂದರು.
Kshetra Samachara
24/09/2022 04:55 pm