ಮಂಗಳೂರು: "ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಬಿಜೆಪಿ ಸರಣಿ ಅಪಮಾನ ಮಾಡುತ್ತಿದೆ" ಎಂದಿರುವ ಮಾಜಿ ಸಚಿವ ರಮಾನಾಥ ರೈಯವರು 2023ರ ವಿಧಾನಸಭೆ ಚುನಾವಣೆಗೆ ಬಂಟ್ವಾಳದಲ್ಲಿ ಸ್ಪರ್ಧಿಸುವ ಉದ್ದೇಶದಿಂದ ಈ ಹೇಳಿಕೆ ನೀಡಿದ್ದಾರೆ. ಆದರೆ, ಈ ಜನ್ಮದಲ್ಲಿ ಅವರು ಬಂಟ್ವಾಳದಲ್ಲಿ ಗೆಲ್ಲುವುದಿಲ್ಲ ಎಂದು ಬಿಜೆಪಿ ದ.ಕ.ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ವ್ಯಂಗ್ಯವಾಡಿದರು.
ನಗರದಲ್ಲಿಂದು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ನಿಂದ ಟಿಕೆಟ್ ಹಾಗೂ ಬಂಟ್ವಾಳದ ಬಿಲ್ಲವರ ವೋಟ್ ಗಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ರಮಾನಾಥ ರೈಯವರು ನಿಜಕ್ಕೂ ನೈಜ ಕಾಂಗ್ರೆಸಿಗರಾದಲ್ಲಿ ಈ ಬಾರಿ ಹೊಸ ಯುವಕರಿಗೆ ಬಂಟ್ವಾಳದಲ್ಲಿ ಟಿಕೆಟ್ ನೀಡಿ. ನೀವು ಯಾಕೆ ಬಂಟ್ವಾಳದ ಕಾಂಗ್ರೆಸ್ ಗೆ ಅವಮಾನ ಮಾಡುತ್ತೀರಿ. ನಿಮ್ಮಷ್ಟು ಅರ್ಹತೆಯುಳ್ಳ ಕಾಂಗ್ರೆಸ್‌ನವರು ಬಂಟ್ವಾಳದಲ್ಲಿ ಇಲ್ಲವೇ ಎಂದು ಪ್ರಶ್ನಿಸಿದರು.
ನಿಮ್ಮ ನೈತಿಕತೆ ಬಗ್ಗೆ ಮಾತನಾಡಿ ರಮಾನಾಥ ರೈಯವರೇ. ಅದು ಬಿಟ್ಟು ಬಿಜೆಪಿ ಬಗ್ಗೆ ಮಾತನಾಡದಿರಿ. ಲೇಡಿಹಿಲ್ ವೃತ್ತಕ್ಕೆ ಮಂಗಳೂರು ಮನಪಾ ಬ್ರಹ್ಮಶ್ರೀ ನಾರಾಯಣ ಗುರು ವೃತ್ತವೆಂದು ಮರು ನಾಮಕರಣ ಮಾಡಿದ ವೇಳೆ ಕಾಂಗ್ರೆಸ್ ನಿಂದ ವಿರೋಧ ವ್ಯಕ್ತವಾಯಿತು.
ಇದು ನಾರಾಯಣ ಗುರುಗಳಿಗೆ ಮಾಡಿದ ಅವಮಾನ ಅಲ್ಲವೇ? ಸಿದ್ಧರಾಮಯ್ಯ ಸಿಎಂ ಆಗಿದ್ದ ವೇಳೆ ಕುದ್ರೋಳಿ ದಸರಾ ಉದ್ಘಾಟನೆಗೆ ಬಂದಿರುವ ಅವರನ್ನು ಗುಂಡು-ತುಂಡು ಕೊಟ್ಟು ನೇರ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗಿಲ್ವ. ಅದು ಅವಮಾನ ಅಲ್ಲವೇ? ಜನಾರ್ದನ ಪೂಜಾರಿಗೆ ಬೈದದ್ದು,ಅವಮಾನ ಮಾಡಿದ್ದು ನೆನಪಿದ್ಯಾ, ಆಗ ನಾರಾಯಣ ಗುರು ಭಕ್ತಿ ಎಲ್ಲಿ ಹೋಗಿತ್ತು? ಈಗ ಟಿಕೆಟ್ ಗಾಗಿ ನಾಟಕ ಮಾಡುತ್ತಿದ್ದೀರಿ. ಬಿಜೆಪಿಯ ಮೇಲೆ ಅಪಾದನೆ ಮಾಡಲು ಈ ರೀತಿ ಮಾಡಿದ್ದಾರೆ ಎಂದು ಬಂಟ್ವಾಳ್ ಕಿಡಿಕಾರಿದರು.
PublicNext
14/09/2022 05:40 pm