ಮುಲ್ಕಿ: ಇಲ್ಲಿಗೆ ಸಮೀಪದ ಬಳ್ಕುಂಜೆ, ಕೊಲ್ಲೂರು, ಉಳೇಪಾಡಿ ಗ್ರಾಮದ 1091 ಎಕರೆ ಭೂ ಪ್ರದೇಶವನ್ನು ಕೈಗಾರಿಕೆಗಳಿಗೆ ಸ್ವಾಧೀನ ಪಡಿಸುವ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕೈಗಾರಿಕಾ ಮಂಡಳಿ ಬೆಂಬಲ ಸಮಿತಿಯ ಸಭೆ ಬಳ್ಕುಂಜೆ ಭಂಡಸಾಲೆ ಅಜಿಲರ ಮನೆಯಲ್ಲಿ ನಡೆಯಿತು.
ಈ ಸಂದರ್ಭ ಬೆಂಬಲ ಸಮಿತಿಯ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡಿ, ಪರಿಸರ ಸ್ನೇಹಿ ಕೈಗಾರಿಕೆಗಳಿಗೆ ಸಮಿತಿ ಬದ್ಧವಾಗಿದ್ದು, 850 ಎಕರೆ ಭೂ ಸ್ವಾಧೀನಕ್ಕೆ ಜನಬೆಂಬಲ ದೊರಕಿದೆ. ಕೈಗಾರಿಕೆಗಳಿಂದ ಊರಿನ ಅಭಿವೃದ್ಧಿ ಸಾಧ್ಯ ಎಂದರು.
ಉದ್ಯಮಿ ದಯಾಶಂಕರ್ ಕೆ.ಶೆಟ್ಟಿ ಮಾತನಾಡಿ, ಯಾವುದೇ ಕಾರಣಕ್ಕೂ ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾಧೀನ ಪಡಿಸುವುದಿಲ್ಲ. ಇದರಲ್ಲಿ ರಾಜಕೀಯವಿಲ್ಲ ಹಾಗೂ ಪ್ರತಿ ಗ್ರಾಮದಲ್ಲಿ ಸಮಿತಿ ರಚನೆ ಮುಖಾಂತರ ಋಣಾತ್ಮಕ ಚಿಂತನೆ ಸರಿಪಡಿಸಲಾಗುವುದು ಎಂದರು.
ಸಮಿತಿ ಸದಸ್ಯ ವಿರಾರ್ ಶಂಕರ್ ಶೆಟ್ಟಿ ಮಾತನಾಡಿ ಬಳ್ಕುಂಜೆ, ಕೊಲ್ಲೂರು, ಉಳೇಪಾಡಿ ಪ್ರದೇಶಗಳಲ್ಲಿ ಶೇ.70 ಗುಡ್ಡ ಪ್ರದೇಶವಿದ್ದು ನಿರುಪಯೋಗವಾಗಿದೆ. ಜಾಗ ಕೊಡುವ ಗ್ರಾಮಸ್ಥರಿಗೆ ಜಾಗದ ಸೂಕ್ತ ಬೆಲೆ ನಿಗದಿಪಡಿಸಲಾಗುವುದು. ಕೈಗಾರಿಕೆಗಳಿಗೆ ಬೆಂಬಲ ನೀಡುವವರನ್ನು ಭೂ ಮಾಫಿಯಾ ಎಂದು ಹೇಳುವ ವಿರೋಧಿಗಳ ಹೇಳಿಕೆ ಸರಿಯಲ್ಲ, ವಾಸ್ತವ ಅರಿತು ಮಾತನಾಡಬೇಕು ಎಂದರು.
ಬಿಜೆಪಿ ಮುಖಂಡ ಜಗದೀಶ ಅಧಿಕಾರಿ, ಭಾರತೀಯ ಕೈಗಾರಿಕಾ ಒಕ್ಕೂಟದ ಜಿಲ್ಲಾ ಮುಖ್ಯಸ್ಥ ಗೌರವ ಹೆಗ್ಡೆ, ವಿಲ್ಸನ್ ಫರ್ನಾಂಡಿಸ್ ಉಡುಪಿ, ಚಿತ್ತರಂಜನ್ ಶೆಟ್ಟಿ ಉಳೇಪಾಡಿ, ಯೋಗೀಶ್ ರಾವ್ ಐಕಳ, ರಿಚರ್ಡ್ ಡಿಸೋಜ ಉಳೇಪಾಡಿ, ಪ್ರಸಾದ್ ಶೆಟ್ಟಿ ಬಳ್ಕುಂಜೆ, ಆಸ್ಟಿನ್ ಸಿಕ್ವೇರಾ, ಮಹಮ್ಮದ್ ನೆಲಕೆರೆ, ಮಾರ್ಕ್ ಮಾರ್ಟಿಸ್ ಕೊಲ್ಲೂರು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
11/09/2022 06:19 pm