ಕಾರ್ಕಳ: ಅಪರೂಪದ ಬೆಳವಣಿಗೆಯಲ್ಲಿ ಕಾರ್ಕಳ ತಾಲೂಕಿನ ಮಾಳ ಗ್ರಾಪಂ ಅಧ್ಯಕ್ಷೆ ವಿರುದ್ಧ ಸದಸ್ಯರು ಅವಿಶ್ವಾಸ ಗೊತ್ತುವಳಿ ನಿರ್ಣಯವನ್ನು ಮಂಡಿಸಿದ್ದು ಮಲ್ಲಿಕಾ ಶೆಟ್ಟಿ ಅವರು ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದಾರೆ.
ಮಾಳ ಗ್ರಾಪಂ 15 ಮಂದಿ ಬಿಜೆಪಿ ಬೆಂಬಲಿತ ಸದಸ್ಯರನ್ನು ಹೊಂದಿದ್ದು, ಇಲ್ಲಿ ಅಧ್ಯಕ್ಷ ಹುದ್ದೆಗೆ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಹುದ್ದೆಗೆ ಸಾಮಾನ್ಯ ಮೀಸಲಾತಿ ಪ್ರಕಟವಾಗಿತ್ತು. 2ನೇ ಬಾರಿ ಸದಸ್ಯೆಯಾಗಿರುವ ಮಲ್ಲಿಕಾ ಶೆಟ್ಟಿ 2021ರ ಫೆಬ್ರವರಿಯಲ್ಲಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು.
ಗ್ರಾಪಂಗೆ ಸಂಬಂಧಿಸಿದಂತೆ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದೇ ಮಲ್ಲಿಕಾ ಶೆಟ್ಟಿ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ಆರೋಪ ಕಳೆದೊಂದು ವರ್ಷದಿಂದ ಕೇಳಬಂದಿತ್ತು. ಸಮಸ್ಯೆ ಬಗೆಹರಿಸುವಲ್ಲಿ ಬಿಜೆಪಿ ಮುಖಂಡರು ಸಾಕಷ್ಟು ಪ್ರಯತ್ನಪಟ್ಟಿದ್ದರೂ ಸಾಧ್ಯವಾಗಿಲ್ಲ. ಅಧ್ಯಕ್ಷ ಸ್ಥಾನದಿಂದ ಅವರನ್ನು ಪದಚ್ಯುತಗೊಳಿಸುವುದಕ್ಕಾಗಿ ಮಲ್ಲಿಕಾ ಶೆಟ್ಟಿ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಉಪಾಧ್ಯಕ್ಷ ಅಶೋಕ್ ಬರ್ವೆ ಸೇರಿದಂತೆ 10 ಸದಸ್ಯರು ಅರ್ಜಿ ಸಲ್ಲಿಸಿದ್ದರು. ಅದರಂತೆ ಅವಿಶ್ವಾಸ ಗೊತ್ತುವಳಿ ಮಂಡನೆಯಾಗಿದ್ದು, ಮಲ್ಲಿಕಾ ಶೆಟ್ಟಿ ಪರ 4, ವಿರುದ್ಧ 10 ಮಂದಿ ಮತ ಚಲಾವಣೆಯಾಗಿದ್ದು ಮಲ್ಲಿಕಾ ಶೆಟ್ಟಿ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದಾರೆ.
Kshetra Samachara
01/09/2022 04:32 pm