ಬೈಂದೂರು: ರಾಜ್ಯದಲ್ಲಿ 2,439 ಹಿಂದುಳಿದ ವರ್ಗದವರ ಹಾಸ್ಟೆಲ್‌ಗಳಿವೆ. ಒಟ್ಟು ಎರಡು ಲಕ್ಷ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, 1.20 ಲಕ್ಷ ವಿದ್ಯಾರ್ಥಿಗಳು ಹೊರಗುಳಿದಿದ್ದಾರೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಅವರು ಬೈಂದೂರು ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕಾರ ಮತ್ತು ಕಾರ್ಯಕರ್ತರ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣದಿಂದ ಹೊರಗುಳಿದ ಮಕ್ಕಳ ಅನುಕೂಲಕ್ಕಾಗಿ ಪ್ರತೀ ಹಾಸ್ಟೆಲ್ ನಲ್ಲಿ ಹೆಚ್ಚುವರಿಯಾಗಿ 25 ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲು ಆದೇಶ ನೀಡಲಾಗಿದೆ. ಇದರಿಂದ ಸುಮಾರು 31,000 ವಿದ್ಯಾರ್ಥಿಗಳಿಗೆ ಮತ್ತಷ್ಟು ಅವಕಾಶ ದೊರೆಯುತ್ತದೆ. 250 ಕೋಟಿ ರೂ. ವೆಚ್ಚದಲ್ಲಿ ಬಾಡಿಗೆ ಕಟ್ಟಡದಲ್ಲಿ ಹೆಚ್ಚುವರಿ ಹಾಸ್ಟೆಲ್ ವ್ಯವಸ್ಥೆ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಾಡಿಕೊಡಲಾಗುವುದು ಎಂದರು.
ಅಗ್ನಿಪಥ ಯೋಜನೆಗೆ ಸಂಬಂಧಿಸಿ ಹಂತ ಹಂತವಾಗಿ ಮೂರು ಜಿಲ್ಲೆಗಳಲ್ಲಿ ಸೇನಾ ತರಬೇತಿ ಸಂಸ್ಥೆ ಆರಂಭಿಸಲಾಗುವುದು. ಉಡುಪಿ ಜಿಲ್ಲೆಯಲ್ಲಿ ಕೋಟಿ- ಚೆನ್ನಯ ಹಾಗೂ ದ.ಕ. ಜಿಲ್ಲೆಯಲ್ಲಿ ರಾಣಿ ಅಬ್ಬಕ್ಕ ಹೆಸರಿನಲ್ಲಿ ತರಬೇತಿ ಕೇಂದ್ರ ಆರಂಭವಾಗಲಿದೆ. ಕೋವಿಡ್ ನಿಂದಾಗಿ ತಟಸ್ಥಗೊಂಡಿರುವ ಮಹಿಳಾ ಹೊಲಿಗೆ ತರಬೇತಿ ಪುನಾರಂಭವಾಗಲಿದೆ ಎಂದರು.
ಈ ಸಂದರ್ಭ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು. ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆನಂದ ಖಾರ್ವಿ ಉಪ್ಪುಂದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಕಾಶ ಜಡ್ಡು, ಪ್ರಿಯದರ್ಶಿನಿ ದೇವಾಡಿಗ ಉಪಸ್ಥಿತರಿದ್ದರು.
Kshetra Samachara
25/08/2022 05:01 pm