ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ರಜತ ಮಹೋತ್ಸವ ಸಮಿತಿಯಲ್ಲಿ ಪತ್ರಕರ್ತರು, ಸ್ಥಳೀಯ ಕಲಾವಿದರ ನಿರ್ಲಕ್ಷ್ಯ: ಜಿಲ್ಲಾ ಪತ್ರಕರ್ತರ ಸಂಘ ಅಸಮಾಧಾನ

ಉಡುಪಿ : ಜಿಲ್ಲೆಯ ರಜತ ಮಹೋತ್ಸವವನ್ನು ಜಿಲ್ಲಾಡಳಿತ ಅದ್ಧೂರಿಯಾಗಿ ಆಚರಿಸುತ್ತಿದೆ. ಆದರೆ ಸಮಿತಿಯಲ್ಲಿ ಪತ್ರಕರ್ತರನ್ನು ಮತ್ತು ಸ್ಥಳೀಯ ಕಲಾವಿದರನ್ನು ನಿರ್ಲಕ್ಷಿಸಲಾಗಿದೆ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯ ರಜತ ಮಹೋತ್ಸವ ಆಚರಣೆ ಸಮಿತಿ ರಚನೆಯಾಗಿದೆ. ಆದರೆ ಜಿಲ್ಲೆ ರಚನೆಯಾಗುವ ಸಂದರ್ಭದಲ್ಲಿ ವರದಿ ಮಾಡಿದ ಮತ್ತು ಆ ಸಂದರ್ಭದಲ್ಲಿ ಜಿಲ್ಲಾ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವರದಿಗಾರರು ಅಥವಾ ಪ್ರಸ್ತುತ ಇರುವ ವರದಿಗಾರರನ್ನು ಸಮಿತಿಯಲ್ಲಿ ಸೇರಿಸಿಲ್ಲ. ಅಂದಿನ ದಿನಗಳಲ್ಲಿ ಜಿಲ್ಲೆಯ ಸ್ಥಿತಿಗತಿಗಳ ಬಗ್ಗೆ ವರದಿ ಮಾಡಿದ್ದ ಮತ್ತು ಈಗ ಕಾರ್ಯನಿರ್ವಹಿಸುತ್ತಿರುವ ಹಿರಿಯ ಪತ್ರಕರ್ತರನ್ನು ಬಳಸಿಕೊಂಡಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗುತ್ತಿತ್ತು. ಆದರೆ ಜಿಲ್ಲಾಡಳಿತ ಪತ್ರಕರ್ತರನ್ನೇ ನಿರ್ಲಕ್ಷಿಸಿದ್ದು ನಿಜಕ್ಕೂ ಖೇದಕರ ವಿಚಾರ. ಈ ನಿಟ್ಟಿನಲ್ಲಿ ಇನ್ನಾದರೂ ಜಿಲ್ಲಾಡಳಿತ ಈ ಕುರಿತು ಚಿಂತಿಸಬೇಕು ಎಂದರು.

ಜಿಲ್ಲೆಯ ರಜತ ಮಹೋತ್ಸವದ ಆಚರಣೆಯ ಸಂದರ್ಭದಲ್ಲಿ ಜಿಲ್ಲೆಯ ಕಲೆ, ಸಂಸ್ಕೃತಿ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ಕೆಲಸ ನಡೆಯಬೇಕಾಗಿದೆ. ಆದರೆ ಇಲ್ಲಿ ಜಿಲ್ಲೆಯ ಕಲೆ ಸಂಸ್ಕೃತಿಯನ್ನು ಮರೆತು ಬೇರೆ ಕಡೆಯಿಂದ ಕಲಾವಿದರನ್ನು ಕರೆಸಿ ಕಾರ್ಯಕ್ರಮ ನಡೆಸುವುದು ಅಷ್ಟೊಂದು ಸಮಂಜಸವಲ್ಲ. ಜಿಲ್ಲೆಯಲ್ಲಿಯೇ ಕಲೆ ಮತ್ತು ಸಂಸ್ಕೃತಿ ವಿಚಾರದಲ್ಲಿ ಹೆಸರು ಮಾಡಿದವರನ್ನು ಗುರುತಿಸಿ ಅವರಿಗೆ ರಜತಮಹೋತ್ಸವದ ಆಚರಣೆಯ ಸಂದರ್ಭದಲ್ಲಿ ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ಮುಂದಿನ ದಿನಗಳಲ್ಲಿ ಸಂಬಂಧಪಟ್ಟವರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಕಾರ್ಯದರ್ಶಿಗಳಾದ ರಹೀಂ ಉಜಿರೆ, ಪ್ರಮೋದ್ ಸುವರ್ಣ, ಕಾರ್ಯಕಾರಿ ಸಮಿತಿ ಸದಸ್ಯರಾದ ಜಯಕರ ಸುವರ್ಣ ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

23/08/2022 05:52 pm

Cinque Terre

4.67 K

Cinque Terre

0

ಸಂಬಂಧಿತ ಸುದ್ದಿ