ಉಡುಪಿ: ಸಿದ್ಧರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಕಿಡಿಗೇಡಿಗಳ ಕೃತ್ಯವನ್ನು ಇಂಧನ ಮತ್ತು ಕನ್ನಡ ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಪರೋಕ್ಷವಾಗಿ ಸಮರ್ಥಿಸಿಕೊಂಡಿದ್ದಾರೆ. ಇದು ಯಾರೂ ಹೇಳಿಕೊಟ್ಟು ಮಾಡಿಸಿದ್ದಲ್ಲ. ಜನರ ಮನಸ್ಸಿನಲ್ಲಿರುವ ಭಾವನೆಗಳು ಸ್ಫೋಟಗೊಂಡಾಗ ಈ ರೀತಿ ಪ್ರತಿಭಟನೆಗಳು ಆಗುತ್ತವೆ ಎಂದಿದ್ದಾರೆ.
ಸಿದ್ದರಾಮಯ್ಯ ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾ ಬಂದಿದ್ದಾರೆ. ಸಾವರ್ಕರ್ ಅವಹೇಳನ ಸಹಿಸಿಕೊಳ್ಳಲು ಯುವ ಸಮುದಾಯ ಸಿದ್ಧವಿಲ್ಲ ಎಂದು ಹೇಳಿದ್ದಾರೆ. ಸಿದ್ದರಾಮಯ್ಯಗೆ ಹಣೆ ಮೇಲೆ ಕುಂಕುಮ ಇಟ್ಟವರನ್ನು ಕಂಡರೆ ಆಗಲ್ಲ ಎಂದು ಹೇಳಿದ ಸಚಿವರು, ಸಾವರ್ಕರ್ ಫೋಟೋ ಕಂಡರೂ ಆಗಲ್ಲ. ತನ್ನ ನಡವಳಿಕೆ, ಹೇಳಿಕೆ, ಆಡಳಿತದಲ್ಲಿ ಪ್ರತ್ಯೇಕತೆಯ ಭಾವನೆ ತೋರಿಸುತ್ತಾರೆ. ಇದನ್ನು ಕರ್ನಾಟಕದ ಜನ ಸಹಿಸುವುದಿಲ್ಲ ಎಂದು ಹೇಳಿದರು.
ಸಾವರ್ಕರ್ ಬಗ್ಗೆ ಹೇಳಿಕೆ ಕೊಡುವಾಗ ಪ್ರತಿಭಟನೆಯನ್ನು ಸಹಿಸುವ ಶಕ್ತಿಯೂ ಇರಬೇಕು ಎಂದ ಅವರು, ಏನು ಬೇಕಾದರೂ ಹೇಳಿಕೆ ಕೊಟ್ಟು ಜೀರ್ಣ ಮಾಡಿಕೊಳ್ಳುತ್ತೇನೆ ಎನ್ನುವ ಕಾಲ ಹೊರಟು ಹೋಗಿದೆ. ಹೋರಾಟದ ಕಾರಣಕ್ಕೆ ಸಾವರ್ಕರ್ ಅವರನ್ನು ವೀರ ಸಾವರ್ಕರ್ ಎಂದು ಕರೆದಿದ್ದಾರೆ. ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ ಅಂದರೆ ಇತಿಹಾಸದ ಬಗ್ಗೆ ಅರ್ಧಂಬರ್ಧ ತಿಳಿದುಕೊಂಡಿದ್ದಾರೆ ಎಂದರ್ಥ.
ಸಿದ್ದರಾಮಯ್ಯನವರೇ ದಯಮಾಡಿ ಅಂಡಮಾನಿನ ಸೆಲ್ಯೂಲರ್ ಜೈಲು ನೋಡಿಕೊಂಡು ಬನ್ನಿ. ಸಮಾಜವಾದಿ ಎಂದು ಹೇಳಿಕೊಂಡು ಲಕ್ಷಾಂತರ ಜನರನ್ನು ಸೇರಿಸಿ ಹುಟ್ಟು ಹಬ್ಬ ಮಾಡುತ್ತೀರಿ. ಸಾವರ್ಕರ್ ಇದ್ದ ಜೈಲನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತೆ.ಅವರು ನಡೆಸಿದ ಹೋರಾಟ ಮತ್ತು ಬ್ರಿಟಿಷರ ಕ್ರೂರತೆ ಯಾವ ರೀತಿ ಇತ್ತು ಅನ್ನೋದು ಗೊತ್ತಾಗುತ್ತೆ ಎಂದು ಹೇಳಿದ್ದಾರೆ.
ರಾಜ್ಯಾದ್ಯಂತ ಸಾವರ್ಕರ್ ಭಾವಚಿತ್ರ ಅಳವಡಿಸುತ್ತಿರುವ ವಿಚಾರವಾಗಿ ಮಾತನಾಡಿದ ಸಚಿವರು ಇಂತಹ ವಿದ್ಯಮಾನಗಳು ಇನ್ನಷ್ಟು ಜಾಸ್ತಿ ಆಗುತ್ತೆ. ಸಾವರ್ಕರ್ ಈ ದೇಶದ ರಾಷ್ಟ್ರೀಯತೆಯ ಪ್ರತೀಕ. ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ ಮೆರವಣಿಗೆಗಳು,ಕಾರ್ಯಕ್ರಮಗಳು, ಬ್ಯಾನರ್ಗಳು, ಪುತ್ಥಳಿಗಳು ಮುಂದಿನ ದಿನಗಳಲ್ಲಿ ವ್ಯಾಪಕವಾಗಿ ಆಗಲಿವೆ. ಸಾವರ್ಕರ್ ಹೆಸರು ಮುನ್ನಲೆಗೆ ಬರಲು ಸಿದ್ದರಾಮಯ್ಯನವರೇ ಕಾರಣವಾಗಿದ್ದಾರೆ ಎಂದು ಹೇಳಿದರು.
ಆರ್ ಎಸ್ ಎಸ್ ನಿಂದ ಸಿದ್ದರಾಮಯ್ಯಗೆ ಜೀವ ಬೆದರಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ನಮಗೆ ಹಿಂಸೆಯ ಮೇಲೆ ಯಾವತ್ತೂ ನಂಬಿಕೆ ಇಲ್ಲ. ನಾವು ಹಿಂಸೆಯನ್ನು ಯಾವತ್ತೂ ಒಪ್ಪಿಲ್ಲ. ಅವರಿಗೆ ಜೀವ ಬೆದರಿಕೆ ಇದ್ದರೆ ರಕ್ಷಣೆಗಾಗಿ ಪೊಲೀಸರಲ್ಲಿ ಮನವಿ ಮಾಡಲಿ ಎಂದು ಹೇಳಿದರು.
PublicNext
19/08/2022 04:31 pm