ಕಾರ್ಕಳ: 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅತ್ಯಂತ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಆಚರಿಸಬೇಕೆನ್ನುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಗಸ್ಟ್ 13 ರಿಂದ 15 ರವರೆಗೆ ಮನೆ ಮನೆಗಳಲ್ಲಿ ಧ್ವಜ ಧ್ವಜ ಹಾರಿಸಲು ಅವಕಾಶ ನೀಡಿವೆ. ಈ ಕಾರ್ಯಕ್ರಮಕ್ಕೆ ಸರಕಾರದಿಂದಲೇ ಕಳಪೆಗುಣಮಟ್ಟದ ಧ್ವಜಗಳನ್ನು ವಿತರಿಸಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ ಹೆಬ್ರಿ ಶ್ರೀಕಾಂತ್ ಶೆಟ್ಟಿ ಆರೋಪಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹರ್ ಘರ್ ತಿರಂಗಾ ಅಭಿಯಾನ ಸ್ವಾಗತಾರ್ಹ. ಆದರೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನವಾಗುತ್ತಿರುವುದು ಸರಿಯಲ್ಲ. ರಾಜ್ಯ ಸರಕಾರವು ಗ್ರಾಮ ಪಂಚಾಯತಿ ಹಾಗೂ ಸ್ಥಳೀಯ ಸಂಸ್ಥೆಗಳ ಮೂಲಕ ಮನೆ ಮನೆಗಳಿಗೆ ಕಳಪೆ ಧ್ವಜ ವಿತರಿಸುತ್ತಿದೆ ಇದರಿಂದ ದೇಶದ ಗೌರವದ ಸಂಕೇತವಾಗಿರುವ ರಾಷ್ಟ್ರಧ್ವಜಕ್ಕೆ ಅವಮಾನವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಕಾರ್ಕಳ ತಾಲೂಕಿನ ಹಲವೆಡೆ ಗ್ರಾಮ ಪಂಚಾಯತಿಗಳು ಕಳಪೆ ಗುಣಮಟ್ಟದ ಧ್ವಜಗಳನ್ನು ವಿತರಿಸಿರುವುದು ಕಂಡುಬಂದಿದೆ ಧ್ವಜ ಸಂಹಿತೆಯ ಪ್ರಕಾರ ರಾಷ್ಟ್ರಧ್ವಜಕ್ಕೆ ತನ್ನದೇ ಆದ ನೀತಿ ನಿಯಮಾವಳಿಗಳು ಇರುವುದರಿಂದ ನಿಗದಿತ ಪ್ರಮಾಣದ ಅಳತೆಯಂತೆ ರಾಷ್ಟ್ರಧ್ವಜವನ್ನು ಮುದ್ರಿಸಬೇಕು ಆದರೆ ಪಂಚಾಯತಿಯಿಂದ ವಿತರಿಸಲಾದ ರಾಷ್ಟ್ರಧ್ವಜಗಳಲ್ಲಿ ಲೋಪದೋಷಗಳು ಕಂಡುಬಂದಿದ್ದು ಕೇಸರಿ ಹಾಗೂ ಹಸಿರು ಪಟ್ಟಿಯ ಅಳತೆಯಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿದೆ ಅಲ್ಲದೇ ಅಶೋಕ ಚಕ್ರವು ವೃತ್ತಾಕಾರವಾಗಿರದೇ ಅಂಡಾಕಾರದಲ್ಲಿದೆ. ಇದು ರಾಷ್ಟ್ರಧ್ವಜ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಸ್ವತಂತ್ರ ಅಮೃತ ಮಹೋತ್ಸವವನ್ನು ಪ್ರತಿಯೊಬ್ಬರೂ ಆಚರಿಸಬೇಕು. ಆದರೆ ಹರ್ ಘರ್ ತಿರಂಗ ಕಾರ್ಯಕ್ರಮಕ್ಕಾಗಿ ಕಳಪೆ ಗುಣಮಟ್ಟದ ರಾಷ್ಟ್ರ ಧ್ವಜಗಳನ್ನು ಮುದ್ರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಶ್ರೀಕಾಂತ್ ಶೆಟ್ಟಿ ಒತ್ತಾಯಿಸಿದ್ದಾರೆ.
ಆದರೆ ಸರಕಾರದ ನಿಯಮಾವಳಿ ಪ್ರಕಾರ ಈ ಬಾರಿ ಧ್ವಜ ಸಂಹಿತೆಯಲ್ಲಿ ಸ್ವಲ್ಪಮಟ್ಟಿನ ಸಡಿಲಿಕೆ ನೀಡಲಾಗಿದೆ. ಹರ್ ಘರ್ ತಿರಂಗಾ ಕಾರ್ಯಕ್ರಮದಲ್ಲಿ ಮನೆಮನೆಗಳಲ್ಲಿ ಧ್ವಜ ಹಾರಿಸುವಾಗ ಧ್ವಜಗಳಲ್ಲಿ ಸಣ್ಣಪುಟ್ಟ ದೋಷಗಳಿದ್ದರೆ ರಿಯಾಯಿತಿ ನೀಡಲಾಗಿದೆ. ಆದರೆ ಧ್ವಜ ಆರೋಹಣ ಹಾಗೂ ಅವರೋಹಣ ಮಾಡುವಾಗ ಸಾರ್ವಜನಿಕವಾಗಿ ಕಡ್ಡಾಯವಾಗಿ ನಿಯಮ ಪಾಲಿಸಬೇಕಾಗುತ್ತದೆ.
Kshetra Samachara
13/08/2022 03:31 pm