ಉಡುಪಿ: ರಾಜ್ಯದಲ್ಲಿ ಇಷ್ಟೊಂದು ಅಮಾಯಕ ಯುವಕರು ಕೊಲೆಯಾಗುತ್ತಿದ್ದು ಇದಕ್ಕೆಲ್ಲಾ ಅಧಿಕಾರದಲ್ಲಿರುವ ಸರಕಾರದ ವೈಫಲ್ಯಗಳೇ ಕಾರಣವಾಗಿದ್ದು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೆಲಿಯೋ ಆಗ್ರಹಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಪ್ರವೀಣ್ ಪೂಜಾರಿ, ಉದಯ್ ಗಾಣಿಗ, ಹರ್ಷ, ಮಸೂದ್, ಪ್ರವೀಣ್ ನೆಟ್ಟಾರ್, ಫಾಝಿಲ್ ಸೇರಿದಂತೆ ಹಲವಾರು ಅಮಾಯಕ ಯುವಕರು ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಕೊಲೆಯಾಗುತ್ತಿದ್ದು ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬೊಮ್ಮಾಯಿಯವರು ಶವದ ಮೇಲೆ ಆಡಳಿತವನ್ನು ಮಾಡುತ್ತಿದ್ದಾರೆ. ಸರಕಾರ ಮೊದಲ ಘಟನೆ ನಡೆದಾಗಲೇ ಸೂಕ್ತ ಮುನ್ನೆಚ್ಚರಿಕೆ ಕ್ರಮ ವಹಿಸಿದ್ದರೆ ಮುಂದೆ ಅಂತಹ ಘಟನೆಗಳು ನಡೆಯುತ್ತಿರಲಿಲ್ಲ. ಆದರೆ ಸರಕಾರ ಸಂಪೂರ್ಣ ನಿದ್ರಾವಸ್ಥೆಯಿಂದ ಕೂಡಿದ್ದರ ಪರಿಣಾಮವಾಗಿ ಪ್ರತಿನಿತ್ಯ ಅಮಾಯಕ ಯುವಕರು ಕೊಲೆಯಾಗುತ್ತಿದ್ದಾರೆ.
ರಾಜ್ಯ ಬಿಜೆಪಿ ಸರಕಾರ ಜಾತಿ, ಧರ್ಮವನ್ನು ನೋಡಿ ವರ್ತನೆ ಮಾಡುವುದು ಮುಖ್ಯಮಂತ್ರಿಗಳು ಗುರುವಾರ ಮಂಗಳೂರಿಗೆ ಭೇಟಿ ನೀಡಿದ ವೇಳೆ ಮತ್ತೊಮ್ಮೆ ಸಾಬೀತಾಗಿದೆ. ತನ್ನ ಪಕ್ಷದ ಕಾರ್ಯಕರ್ತ ಕೊಲೆಯಾಗಿದ್ದು ಅವರ ಮನೆಗೆ ತೆರಳಿ ಮನೆಯವರಿಗೆ ಸಾಂತ್ವಾನ ಹೇಳಿ ಪರಿಹಾರ ನೀಡಿರುವುದು ತಪ್ಪಲ್ಲ. ಆದರೆ ಅದೇ ರೀತಿ ಮಸೂದ್ ಎಂಬ ಆಮಾಯಕ ಯುವಕ ದುಷ್ಕರ್ಮಿಗಳಿಂದ ಕೊಲೆಯಾಗಿದ್ದು ಅವರ ಮನೆಗೂ ಭೇಟಿ ನೀಡಿ ಆತನ ಹೆತ್ತವರಿಗೆ ಸಾಂತ್ವನ ಹೇಳುವ ಕೆಲಸ ಯಾಕೆ ಮಾಡಲಿಲ್ಲ? ಚುನಾಯಿತ ಸರಕಾರ ಯಾವಾಗಲೂ ಪಕ್ಷಪಾತವಿಲ್ಲದೆ ಪ್ರತಿಯೊಬ್ಬರಿಗೂ ನ್ಯಾಯ ಕೊಡಿಸುವ ಕೆಲಸವನ್ನು ಮಾಡಬೇಕಾಗಿದೆ. ಈ ನಡುವೆ ಮುಖ್ಯಮಂತ್ರಿಗಳು ಮಂಗಳೂರಿನಲ್ಲಿ ಇದ್ದಾಗಲೇ ಇನ್ನೋರ್ವ ಯುವಕ ಸುರತ್ಕಲ್ ನಲ್ಲಿ ಕೊಲೆಯಾಗಿದ್ದು ಕಾನೂನು ಸುವವ್ಯಸ್ಥೆ ರಾಜ್ಯದಲ್ಲಿ ಸಂಪೂರ್ಣ ಹದಗೆಟ್ಟಿರುವುದು ಎದ್ದು ಕಾಣುತ್ತದೆ.
ಕೇವಲ ಕಠಿಣ ಕ್ರಮದ ಭರವಸೆ ಬಾಯಲ್ಲಿ ನೀಡದೇ ಅದನ್ನು ಕಾರ್ಯರೂಪದಲ್ಲಿ ನಡೆದದ್ದೇ ಆದರೆ ಮುಂದೆ ಅಂತಹ ಘಟನೆಗಳು ನಡೆಯಲು ಆಸ್ಪದವಿರುತ್ತಿರಲಿಲ್ಲ. ಜಾತಿ ಧರ್ಮದ ಆಧಾರದಲ್ಲಿ ವಿಂಗಡನೆ, ಪಕ್ಷಪಾತ ಮಾಡಿದಾಗ ಇಂತಹ ಘಟನೆಗಳು ಮರುಕಳಿಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಆದ್ದರಿಂದ ಸರಕಾರ ಇದರ ಬಗ್ಗೆ ನೈತಿಕ ಹೊಣೆಯನ್ನು ಹೊರಬೇಕಾಗುತ್ತುದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
29/07/2022 02:26 pm