ಉಳ್ಳಾಲ: ಸೋಮೇಶ್ವರ ಬಟ್ಟಪ್ಪಾಡಿ ಸಮುದ್ರದಲ್ಲಿ ಪ್ರಿನ್ಸೆಸ್ ಮಿರಾಲ್ ಹೆಸರಿನ ಸರಕು ಹಡಗು ಮುಳುಗುತ್ತಿದ್ದು, ಹಡಗಿನ ಡರ್ಟಿ ವಾಟರ್ ಟ್ಯಾಂಕಿನಿಂದ ತೈಲ ಸೋರಿಕೆಯಾಗುತ್ತಿರುವ ಗಂಭೀರ ವಿಚಾರದ ಬಗ್ಗೆ ಸರಕಾರ, ಜಿಲ್ಲಾಡಳಿತದ ನಿರ್ಲಕ್ಷ್ಯ ಸಲ್ಲದು ಎಂದು ಶಾಸಕ ಯು.ಟಿ. ಖಾದರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಡಗಿನಿಂದ ತೈಲ ಸೋರಿಕೆಯಾಗದಂತೆ ತಡೆಯುವುದು ಜಿಲ್ಲಾಡಳಿತದ ಜವಾಬ್ದಾರಿ. ಇಂತಹ ಘಟನೆ ನಡೆದ ಸಂದರ್ಭ ಹಡಗಿನ ಮಾಲಕರು ಅಥವಾ ವಿಮಾ ಕಂಪನಿಯವರು ಘಟನಾ ಸ್ಥಳಕ್ಕೆ ಬರಬೇಕು. ಅದು ಸಾಧ್ಯವಾಗದಿದ್ದರೆ ಜಿಲ್ಲಾಧಿಕಾರಿ, ಸರಕಾರದ ಆದೇಶ ಪಡೆದು ಆಧುನಿಕ ತಂತ್ರಜ್ಞಾನ ಬಳಸಿ ತೈಲ ಖಾಲಿಗೊಳಿಸಬೇಕು.
ತೈಲ ಸೋರಿಕೆಯಾಗಿ ಸಮುದ್ರ ಸೇರಿದರೆ ಸ್ಥಳೀಯರು ಬಹಳಷ್ಟು ಮಾರಕ ಸಮಸ್ಯೆ ಎದುರಿಸಬೇಕಾದೀತು. ಈ ಬಗ್ಗೆ ಜಿಲ್ಲಾಧಿಕಾರಿಯವರ ಬಳಿ ಮಾತನಾಡಿದ್ದೇನೆ. ತಜ್ಞರೊಡಗೂಡಿ ತಾನೂ ಸ್ಥಳ ಪರಿಶೀಲನೆ ನಡೆಸಿ ಪರಿಹಾರ ಕಂಡು ಕೊಳ್ಳಲು ಪ್ರಯತ್ನಿಸುತ್ತೇನೆ. ಇಂತಹ ಗಂಭೀರ ವಿಚಾರದಲ್ಲಿ ಸರಕಾರವೇ ಮೌನ ವಹಿಸಿದರೆ ಜನಪ್ರತಿನಿಧಿಗಳು, ಜನರು ಏನು ತಾನೇ ಮಾಡಲು ಸಾಧ್ಯ? ಹಡಗು ಮೇಲಕ್ಕೆತ್ತಲು ಸಾಧ್ಯವಿಲ್ಲ. ಆದಷ್ಟು ಶೀಘ್ರ ಕನಿಷ್ಠ ತೈಲವನ್ನಾದರೂ ಖಾಲಿ ಮಾಡಬೇಕೆಂದು ಆಗ್ರಹಿಸಿದರು.
Kshetra Samachara
02/07/2022 09:54 pm