ಕಡಬ: ಕಡಬ ತಾಲ್ಲೂಕಿನ ರಾಮಕುಂಜದಲ್ಲಿ ಸರ್ಕಾರದಿಂದ ನೂತನ ಗೋಶಾಲೆ ನಿರ್ಮಾಣಕ್ಕೆ ಪಶು ಸಂಗೋಪನಾ ಸಚಿವ ಪ್ರಭು ಬಿ.ಚವಾಣ್ ಬುಧವಾರ ಶಂಕುಸ್ಥಾಪನೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, 'ಕಡಬದ ಕೊಯಿಲದಲ್ಲಿ ಪಶುವೈದ್ಯಕೀಯ ಕಾಲೇಜು ನಿರ್ಮಾಣ ಹಂತದಲ್ಲಿದ್ದು, ಶೀಘ್ರದಲ್ಲಿ ಅಂತಿಮಗೊಳಿಸಿ ಮುಂದಿನ ಆರು ತಿಂಗಳೊಳಗೆ ಶೈಕ್ಷಣಿಕ ತರಗತಿಗಳನ್ನು ಆರಂಭಿಸಲಾಗುವುದು. ಜೊತೆಗೆ ಮುಂದಿನ ಡಿಸೆಂಬರ್ ಅಂತ್ಯಕ್ಕೆ ರಾಮಕುಂಜದಲ್ಲಿ ದ.ಕ ಜಿಲ್ಲೆಯ ಸರ್ಕಾರಿ ಗೋಶಾಲೆ ಲೋಕಾರ್ಪಣೆಗೊಳ್ಳಲಿದೆ' ಎಂದು ತಿಳಿಸಿದರು.
ಸುಮಾರು 50 ಲಕ್ಷ ರೂ ವೆಚ್ಚದಲ್ಲಿ ಗೋಶಾಲೆ ನಿರ್ಮಾಣವಾಗಲಿದೆ. ಯೋಜನೆ ಅನುಷ್ಠಾನಕ್ಕಾಗಿ ನೀಲ ನಕಾಶೆ ತಯಾರಾಗಿದೆ. ನರೇಗಾ ಯೋಜನೆಯಡಿಯಲ್ಲಿ ಹಟ್ಟಿಗಳ ರಚನೆ ನಡೆಯಲಿದೆ. ಮುಂದಿನ ಡಿಸೆಂಬರ್ ವೇಳೆಗೆ ಗೋಶಾಲೆ ಲೋಕಾರ್ಪಣೆಯಾಗಲಿದೆ ಎಂದು ಹೇಳಿದರು.
ಕೊಯಿಲದ ಪಶು ವೈದ್ಯಕೀಯ ಕಾಲೇಜ್ ಕಟ್ಟಡ ಕಾಮಗಾರಿಗೆ ಸರ್ಕಾರದ ಕಡೆಯಿಂದ ಅರ್ಥಿಕ ಸಹಕಾರಕ್ಕೆ ಕೊರತೆಯಾಗಿಲ್ಲ. ಹಂತ ಹಂತವಾಗಿ ಅನುದಾನ ಬಿಡಗಡೆಗೊಳಿಸಲಾಗಿದೆ. ಕಾಮಾಗಾರಿ ಅಂತಿಮ ಹಂತಕ್ಕೆ ತಲುಪಿದೆ. ಶೀಘ್ರದಲ್ಲಿ ಲೋಕಾರ್ಪಣೆಗೊಳಿಸಲಾಗುವುದು. ನಿರ್ಮಾಣ ಹಂತದ ಕಟ್ಟಡಗಳಲ್ಲಿ ಮಳೆ ನೀರು ಸೋರುತ್ತಿದೆ ಎನ್ನುವ ಆರೋಪಕ್ಕೆ ಉತ್ತರಿಸಿದ ಸಚಿವರು ಈ ಬಗ್ಗೆ ಕಾಮಗಾರಿ ಲೋಪವಾಗಿದೆಯೆ ಎಂದು ಇಂಜಿನಿಯರ್‌ಗಳ ಮೂಲಕ ಪರಿಶೀಲಿಸಲಾಗುವುದು. ಲೋಪವಾದಲ್ಲಿ ಸರಿಪಡಿಸಿಕೊಡುವ ತನಕ ಬಿಲ್ಲು ಪಾವತಿ ತಡೆಹಿಡಿಯಲಾಗುವುದು ಎಂದರು.
ಇನ್ನು ಪ್ರತ್ಯೇಕ ರಾಜ್ಯ ಬೇಕೆನ್ನುವ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಪ್ರಭು ಬಿ.ಚವಾಣ್ ಅವರು, ಕತ್ತಿ ಅವರ ಹೇಳಿಕೆ ವೈಯಕ್ತಿಕವಾದ ಅಭಿಪ್ರಾಯ. ಅದರ ಬಗ್ಗೆ ಸರಕಾರಕ್ಕೆ ಗೊತ್ತಿಲ್ಲ ಎಂದು ತಿಳಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಸಂಜೀವ್ ಮಠಂದೂರ್, ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಾಲತಿ.ಎನ್.ಕೆ ಹಾಗೂ ಅಧಿಕಾರಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.
PublicNext
29/06/2022 09:49 pm