ಸುರತ್ಕಲ್: "ಎನ್ ಐಟಿಕೆ ತಟೋಲ್ ಗೇಟ್ ನಿಂದ ಹಣದ ಸೂಟ್ ಕೇಸ್ ಪಡೆದವರೇ ನನ್ನ ಬಗ್ಗೆ ವೈಯುಕ್ತಿಕ ನಿರಾಧಾರ ಆರೋಪ ಮಾಡುತ್ತಿದ್ದಾರೆ" ಎಂದು ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಬಿಜೆಪಿ ನಾಯಕರ ಆರೋಪಕ್ಕೆ ಪತ್ರಿಕಾಗೋಷ್ಠಿಯಲ್ಲಿ ತಿರುಗೇಟು ನೀಡಿದ್ದಾರೆ.
"ನಾನು ಸುರತ್ಕಲ್ ಟೋಲ್ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದು ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಟೋಲ್ ರದ್ದು ಕುರಿತಂತೆ ಪ್ರಶ್ನಿಸಿದ್ದಕ್ಕೆ ನನ್ನನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ.
ನಾನು ರಾಜಕೀಯಕ್ಕೆ ಬರುವಾಗ ಹೇಗಿದ್ದೆ, ಈಗ ಎಷ್ಟು ಆಸ್ತಿ ಸಂಪಾದನೆ ಮಾಡಿದ್ದೇನೆ ಎಂದು "ಬಿಜೆಪಿ ಯುವಮೋರ್ಚಾ ಮಂಗಳೂರು ಉತ್ತರ" ಹೆಸರಲ್ಲಿ ಪೋಸ್ಟರ್ ಅನ್ನು ಶೇರ್ ಮಾಡಲಾಗುತ್ತಿದೆ. ಅದರಲ್ಲಿ ಹೇಳಿದಂತೆ ಟೋಲ್ ಆಗಿದ್ದು ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ಇದ್ದಾಗ ಅಲ್ಲ, ಬಿಜೆಪಿ ಸರಕಾರ ಮತ್ತದರ ಜನಪ್ರತಿನಿಧಿಗಳ ಅಕ್ರಮದ ಕೂಸು ಈ ಟೋಲ್ ಗೇಟ್. ಇನ್ನು ನಾನು ಆಗ ಹೇಗಿದ್ದೀನೋ ಈಗಲೂ ಹಾಗೇ ಇದ್ದೇನೆ.
ಇಲ್ಲಿನ ಶಾಸಕರಂತೆ ಟೋಲ್ ಗೇಟ್ ಕೊಡುವ ಸೂಟ್ ಕೇಸ್ ನಿಂದಲ್ಲ. ಅಕ್ರಮ ಟೋಲ್ ಗೇಟ್ ನಿಂದ ಸೂಟ್ ಕೇಸ್ ಪಡೆಯುವ ಬದಲು ಭಿಕ್ಷೆ ಬೇಡುತ್ತಿದ್ದರೆ ಇವರಿಗೆ ಮತಕೊಟ್ಟು ಗೆಲ್ಲಿಸಿದ ಮತದಾರರು ನೆಮ್ಮದಿಯಿಂದ ಇರುತ್ತಿದ್ದರು" ಎಂದು ಪ್ರತಿಭಾ ಹೇಳಿದರು.
ಸುರತ್ಕಲ್ ಎನ್ಐಟಿಕೆ ಟೋಲ್ ಆರಂಭವಾಗುವ ಸಂದರ್ಭದಲ್ಲಿ ಕೇಂದ್ರ ಸರಕಾರವನ್ನು ಪ್ರತಿನಿಧಿಸುವ ಸಂಸದ ನಳಿನ್ ಕುಮಾರ್ ಕಟೀಲ್ ಜನರ ಜೊತೆ ನಿಂತಿದ್ದರೆ ಸುರತ್ಕಲ್ ಟೋಲ್ ಗೇಟ್ ಸ್ಥಾಪನೆಗೊಳ್ಳಲು ಸಾಧ್ಯವೇ ಇರಲಿಲ್ಲ. ಇದೆಲ್ಲದರ ಅರಿವಿಲ್ಲದೆ ಹಣಕಾಸು ವಿಚಾರದಲ್ಲಿ ಆರೋಪ ಮಾಡಿ ಶಾಸಕ ಭರತ್ ಶೆಟ್ಟಿ ತನ್ನ ಯೋಗ್ಯತೆಯನ್ನು ಬಯಲು ಮಾಡಿದ್ದಾರೆ. ಬಿಜೆಪಿ ಯುವಮೋರ್ಚಾ ನನ್ನ ಬಗ್ಗೆ ಇಲ್ಲಸಲ್ಲದ್ದನ್ನು ಹೇಳಿ ಜನರನ್ನು ಮಂಗ ಮಾಡುವ ಬದಲು ಶಾಸಕರನ್ನು ಸಂಸದರನ್ನು ಪ್ರಶ್ನೆ ಮಾಡಲಿ ಎಂದು ಪ್ರತಿಭಾ ಹೇಳಿದ್ದಾರೆ.
Kshetra Samachara
20/06/2022 04:55 pm