ಬಂಟ್ವಾಳ: ಉತ್ತರ ಪ್ರದೇಶದಲ್ಲಿ ಗಲಭೆಕೋರರು, ಅಶಾಂತಿ ಸೃಷ್ಟಿಸುವವರನ್ನು ಮಟ್ಟ ಹಾಕಲು ಯೋಗಿ ಆದಿತ್ಯನಾಥ್ ನಡೆಸುವ ಕಾರ್ಯಾಚರಣೆಯಾದ ಬುಲ್ಟೋಜರ್ ಮಾಡೆಲ್ ಅನ್ನು ಕರ್ನಾಟಕದಲ್ಲೂ ತರಲು ನಾವು ಸಿದ್ಧ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಬಿಜೆಪಿಯ ಬಂಟ್ವಾಳ ಕ್ಷೇತ್ರ ಮಹಿಳಾ ಮೋರ್ಚಾ ವತಿಯಿಂದ ನಾರಿ ಸಮ್ಮಾನ್ ದೇಶದ ಅಭಿಯಾನದದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಜಾತಿ, ಧರ್ಮದ ತಾರತಮ್ಯ ಮಾಡದೆ ತಂದ ಯೋಜನೆಗಳ ಫಲಾನುಭವಿಗಳು ಎಲ್ಲ ಧರ್ಮ, ಜಾತಿಯವರೂ ಇದ್ದಾರೆ, ಸವಲತ್ತು ಪಡೆಯುವಾಗ ನೆನಪಾಗದೆ, ಕೇವಲ ಮೋದಿ ದ್ವೇಷ ಮಾಡುತ್ತಾ, ಬಿಜೆಪಿಯನ್ನು ಕೋಮುವಾದಿಗಳು ಎಂದು ಜರೆಯುತ್ತಿರುವುದನ್ನು ಪ್ರಸ್ತಾಪಿಸಿದ ಸಿ.ಟಿ. ರವಿ, ಇವೆಲ್ಲವನ್ನೂ ಲೆಕ್ಕಿಸದೆ ಬಿಜೆಪಿ ಮುನ್ನಡೆಯುತ್ತಿದ್ದು, ವಿಶ್ವಮಾನ್ಯರಾಗಿ ನರೇಂದ್ರ ಮೋದಿ ಭಾರತದ ಹಿರಿಮೆಯನ್ನು ಎತ್ತಿಹಿಡಿದಿದ್ದಾರೆ ಎಂದರು.
ಬಿಜೆಪಿಯಲ್ಲಿ ಭಾರತ್ ಮಾತಾ ಕೀ ಜೈ ಎಂದರೆ, ಇತರ ಪಕ್ಷಗಳಲ್ಲಿ ವ್ಯಕ್ತಿಗೆ ಜೈ ಎನ್ನಲಾಗುತ್ತದೆ, ಕುಟುಂಬ ರಾಜಕಾರಣದಲ್ಲಿ ತೊಡಗಿರುವ ಕಾಂಗ್ರೆಸ್, ಎನ್.ಸಿ.ಪಿ, ಜೆಡಿಎಸ್, ಟಿಎಂಸಿ ಸಹಿತ ರಾಜಕೀಯ ಪಕ್ಷಗಳು ಬಿಜೆಪಿ ಮೇಲೆ ವಿನಾ ಕಾರಣ ಕೋಮುವಾದದ ಹೆಸರು ಹೇಳುತ್ತಿವೆ ಎಂದ ಅವರು, ಬಿಜೆಪಿ ನೈಜ ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿದೆ ಎಂದರು.
ಕಾರ್ಯಕ್ರಮವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಉದ್ಘಾಟಿಸಿ ಮಾತನಾಡಿ, ಮನೆ ಮನೆಗೆ ದೇಶಕ್ಕೆ ಪ್ರಧಾನಿ ಮೋದಿ ಅವರ ಕೊಡುಗೆಗಳನ್ನು ತಿಳಿಸುವ ಕಾರ್ಯ ಆಗಬೇಕಾಗಿದೆ ಎಂದರು.
Kshetra Samachara
12/06/2022 09:52 am