ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮದಲ್ಲಿ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ನಾಮಫಲಕ ಹಾಕುವ ಮೂಲಕ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ಹೇಳಿದ್ದಾರೆ.
ಇವತ್ತು ಎಸ್ಪಿಗೆ ಮನವಿ ಸಲ್ಲಿಸಿದ ಬಳಿಕ ಪಬ್ಲಿಕ್ ನೆಕ್ಸ್ ಜೊತೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ನಿರಂತರವಾಗಿ ಸಂಯಮದಿಂದ ವರ್ತಿಸಿದೆ. ಆದರೆ ಆಳುವ ಬಿಜೆಪಿ ಪಕ್ಷ ಜನರ ಭಾವನೆಗಳೊಂದಿಗೆ ಚೆಲ್ಲಾಟ ಆಡುವ ಮೂಲಕ ನಿರಂತರ ಶಾಂತಿ ಕದಡುವ ವ್ಯವಸ್ಥಿತ ಷಡ್ಯಂತ್ರ ನಡೆಸುತ್ತಿದೆ. ಗಾಂಧಿ ಹಂತಕನ ಹೆಸರನ್ನು ರಸ್ತೆಗೆ ಹಾಕಿರುವುದು ಕೂಡ ಇದರ ಭಾಗವಾಗಿದೆ.
ದೇಶದಲ್ಲಿ ಉಗ್ರವಾದವನ್ನು ವಿರೋಧಿಸುತ್ತಿರುವವರು, ಗಾಂಧಿ ಹಂತಕನ ಹೆಸರನ್ನು ರಸ್ತೆಗೆ ಇಡುವುದು ಕೂಡ ಉಗ್ರವಾದ ಎಂಬುದನ್ನುಅರಿತುಕೊಳ್ಳಬೇಕು.ನಾಥೂರಾಮ್ ಗೋಡ್ಸೆ ಹೆಸರನ್ನು ರಸ್ತೆಗೆ ಹಾಕಿದ ಬಗ್ಗೆ ನಾವು ಎಸ್ಪಿಗೆ ಮನವಿ ಸಲ್ಲಿಸಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದೇವೆ ಎಂದು ಹೇಳಿದ್ದಾರೆ.
PublicNext
07/06/2022 12:57 pm