ಮೂಡುಬಿದಿರೆ: ಅಧಿಕಾರ ಸ್ವೀಕರಿಸಿದ ನಾಲ್ಕೇ ಗಂಟೆಗಳಲ್ಲಿ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಘೋಷಿಸಲಾಗಿತ್ತು. ಇಂದು ಈ ಯೋಜನೆಯ ಫಲ ರೈತರ ಮಕ್ಕಳಿಗೆ ತಲುಪಿರುವುದು ಅತ್ಯಂತ ಸಮಾಧಾನ ತಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಬುಧವಾರ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ರೈತ ವಿದ್ಯಾನಿಧಿ ಫಲಾನುಭವಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ನಂತರ ಮಾತನಾಡಿದರು.
ವಿದ್ಯಾರ್ಥಿಗಳು ಯೋಜನೆಯ ಸದುಪಯೋಗ ಪಡೆದುಕೊಂಡಿರುವುದನ್ನು ಕಂಡು ಸಂತಸವಾಗಿದೆ ಎಂದ ಅವರು ರೈತರ ಮಕ್ಕಳೂ ಉನ್ನತ ಸಾಧನೆ ಮಾಡಬೇಕು. ಆರ್ಥಿಕವಾಗಿ ಸಬಲರಾಗಬೇಕು ಎಂಬ ಉದ್ದೇಶದಿಂದ ಅಧಿಕಾರಕ್ಕೆ ಬಂದು ನಾಲ್ಕೇ ಘಂಟೆಯಲ್ಲಿ ಈ ಯೋಜನೆಯನ್ನು ಜಾರಿ ತರಲಾಗಿದೆ ಎಂದು ಹೇಳಿದರು.
ರೈತ ಮಣ್ಣು, ಬಿಸಿಲು, ಕಲ್ಲು, ಮಳೆ, ಗಾಳಿ ಚಳಿಯೆನ್ನದೆ ದುಡಿಯುತ್ತಾನೆ. ಅವನ ಕೈಯ ರೇಖೆಗಳು ಅಳಿದರೂ ದುಡಿಮೆಯ ಮೂಲಕ ತನ್ನ ಹಣೆಬರಹ ಬರೆಯುತ್ತಾನೆ; ದೇಶದ ಹಣೆಬರಹವನ್ನೂ ಬರೆಯುತ್ತಾನೆ. ದೇವರು ಕಾರ್ಮಿಕರ ಶ್ರಮದಲ್ಲಿದ್ದಾನೆ; ರೈತರ ಬೆವರಿನಲ್ಲಿದ್ದಾನೆ ಎಂದು ಕವಿ ರವೀಂದ್ರನಾಥ ಟ್ಯಾಗೋರರು ಹೇಳಿದ್ದಾರೆ. ಇಂತರ ರೈತರ ಬಗ್ಗೆ ಗೌರವ ಇರಬೇಕು. ಬೆಲೆ ಕೊಡಬೇಕು. ಆದರೆ ರೈತ ಸಂಕಷ್ಟದಲ್ಲಿದ್ದಾನೆ. ಇದನ್ನು ಹಳ್ಳಿಗಳಿಗೆ ಭೇಟಿ ನೀಡಿದಾಗ ತಾವು ಕಣ್ಣಾರೆ ಕಂಡಿರುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಗೋವಿಂದ ಎಂ. ಕಾರಜೋಳ, ಆರ್. ಅಶೋಕ, ಕೋಟ ಶ್ರೀನಿವಾಸ ಪೂಜಾರಿ, ಸುನಿಲ್ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಮೋಹನ್ ಆಳ್ವ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
PublicNext
01/06/2022 09:50 pm