ಉಡುಪಿ: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ವಿಚಾರವಾಗಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸಮಾಜ ಮತ್ತು ಕನ್ನಡ ಪಠ್ಯ ಪರಿಷ್ಕರಣೆ ಮಾಡಿದ್ದೇವೆ. ಆದರೆ ಡಿಕೆಶಿ, ಸಿದ್ದರಾಮಯ್ಯ ಇಲ್ಲದ ಸಲ್ಲದ ಊಹಾಪೋಹ ಸೃಷ್ಟಿ ಮಾಡುತ್ತಿದ್ದಾರೆ. ಬರಗೂರು ರಾಮಚಂದ್ರಪ್ಪ, ದೇವನೂರು ಮಹಾದೇವ ಇಲ್ಲಸಲ್ಲದ ಊಹಾಪೋಹ ಸೃಷ್ಟಿ ಮಾಡಿದ್ದಾರೆ. ಸಚಿವ ಬಿ.ಸಿ.ನಾಗೇಶ್ ಮತ್ತು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಚರ್ಚೆ ಮಾಡೋಣ ಎಂದು ಕರೆ ನೀಡಿದರೂ, ಚರ್ಚೆಯಿಂದ ಯಾಕೆ ಪಲಾಯನ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಅನಗತ್ಯ ತಕರಾರು ಎತ್ತುವವರು ವಿಚಾರ ನಪುಂಸಕರು. ಇವರಲ್ಲಿ ವಿಚಾರ ಇಲ್ಲ ಬರೀ ಉಗುಳು ಮಾತ್ರ. ವಿಚಾರ ನಪುಂಸಕತೆ ಇರುವುದರಿಂದ ಬರವಣಿಗೆ ಬಿಟ್ಟು ಎಷ್ಟೋ ವರ್ಷಗಳಾದವು. ಇವರು ಮೈಕ್ ಮುಂದೆ ನಿಲ್ಲುವ ಮೈಕಾಸುರರಾಗಿದ್ದಾರೆ. ವಿಚಾರ ನಪುಂಸಕತೆ ಬಿಟ್ಟು ಬಹಿರಂಗವಾಗಿ ಚರ್ಚೆಗೆ ಬನ್ನಿ. ಭಗತ್ ಸಿಂಗ್ ಪಠ್ಯ ಕೈಬಿಟ್ಟಿದ್ದಕ್ಕೆ ಸಾಕ್ಷಿ ತೋರಿಸಿ,ನಾರಾಯಣ ಗುರು ಪಠ್ಯವನ್ನು ಸಮಾಜದಿಂದ ಕನ್ನಡ ಪಾಠಕ್ಕೆ ವರ್ಗಾಯಿಸಲಾಗಿದೆ. ಏಳನೇ ತರಗತಿಯ ಪಠ್ಯದಲ್ಲೂ ನಾರಾಯಣ ಗುರುಗಳ ಪಾಠ ಇದೆ ಎಂದು ಹೇಳಿದರು.
ದೇವನೂರು ಮಹಾದೇವ 2014, 2019 ರಲ್ಲಿ ಮೈಸೂರಿನಲ್ಲಿ ನನ್ನ ವಿರುದ್ಧ ಪ್ರಚಾರ ಮಾಡಿದ್ದಾರೆ. ಆ ಭಾಗದಲ್ಲಿ ಜನ ಏನು ತೀರ್ಪು ಕೊಟ್ಟಿದ್ದಾರೆ ಎಂದು ಗೊತ್ತಿದೆ. ದೇವನೂರು ಮಹಾದೇವ ಅವರ ಬಗ್ಗೆ ವೈಯಕ್ತಿಕವಾಗಿ ಅಪಾರ ಗೌರವವಿದೆ.ಕುಸುಮಬಾಲೆ ಎಂಬ ಅದ್ಭುತ ಕೃತಿಯನ್ನು ಬರೆದವರು.ಕಾಂಗ್ರೆಸ್ ಪ್ರಚಾರ, ಊಹಾಪೋಹಗಳನ್ನು ಬಿಟ್ಟು ಹಿಂದಿನ ಮಹಾದೇವರಾಗಿ. ಮತ್ತೆ ಪೆನ್ನು ಕೈಗೆತ್ತಿಕೊಂಡು ಒಂದು ಅದ್ಭುತ ಕೃತಿಯನ್ನು ರಚನೆ ಮಾಡಿ.ನಾವು ಕೂಡ ದೇವನೂರು ಮಹಾದೇವರನ್ನು ಇಷ್ಟಪಡುತ್ತೇವೆ, ಗೌರವಿಸುತ್ತೇವೆ. ಆದರೆ ಈಗ ಪೆನ್ನಿಗೆ ನಿವೃತ್ತಿ ಕೊಟ್ಟು ನೀವು ಮೈಕ್ ಮುಂದೆ ನಿಂತಿದ್ದೀರಿ ಎಂದು ಹೇಳಿದ್ದಾರೆ.
PublicNext
28/05/2022 03:38 pm