ಉಡುಪಿ: ಪ್ರಮೋದ್ ಮಧ್ವರಾಜ್ ಪಕ್ಷ ಬಿಟ್ಟರೂ ಕಾರ್ಯಕರ್ತರು ಜಗ್ಗಲಿಲ್ಲ. ಉಡುಪಿ ಕಾಂಗ್ರೆಸ್ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ. ರಾಜ್ಯ ಕಾಂಗ್ರೆಸ್ ಕಾರ್ಯಕರ್ತರ ಜೊತೆಗಿದೆ. ಮುಂದೆ ಯಾರನ್ನು ಚುನಾವಣಾ ಕಣಕ್ಕೆ ಇಳಿಸಲಿದೆ ಎಂದು ಶೀಘ್ರದಲ್ಲೇ ಗೊತ್ತಾಗುತ್ತೆ. ನಾಯಕರು ಪ್ರಪೋಸಲ್ ನನಗೆ ನೀಡಲಿದ್ದಾರೆ. ನಾವೆಲ್ಲ ಕೂತು ಉಡುಪಿ ವಿಧಾನಸಭಾ ಕ್ಷೇತ್ರದ ಮುಂದಿನ ಅಭ್ಯರ್ಥಿ ನಿರ್ಧರಿಸಲಿದ್ದೇವೆ ಎಂದು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನದಲ್ಲಿ ಪ್ರಮೋದ್ ಪಶ್ಚಾತಾಪ ಪಡುತ್ತಾರೆ. ಪ್ರಮೋದ್ ಹಾಗೂ ಅವರ ಕುಟುಂಬಕ್ಕೆ ಕಾಂಗ್ರೆಸ್ ಪಕ್ಷ ಎಲ್ಲವನ್ನೂ ಕೊಟ್ಟಿತ್ತು. ಪ್ರಮೋದ್ ನನ್ನ ಪಕ್ಕದಲ್ಲಿ ಕುಳಿತುಕೊಳ್ತಿದ್ರು ಈಗ ಕೆಳಗೆ ಕುಳಿತುಕೊಳ್ಳುವಂತಾಗಿದೆ. ಫೋಟೋಗಳನ್ನ ನೋಡಿ ಬೇಸರವಾಯಿತು. ಆದಷ್ಟು ಬೇಗ ಪ್ರಮೋದ್ ಪಶ್ಚಾತಾಪ ಪಡುತ್ತಾರೆ. ನಮ್ಮ ಪಕ್ಷದ ಕಾರ್ಯಕರ್ತರು ಉತ್ಸಾಹದಲ್ಲಿದ್ದಾರೆ. ಬಹಳಷ್ಟು ಬಿಜೆಪಿ ಕಾರ್ಯಕರ್ತರು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರಲಿದ್ದಾರೆ. ಬಹಳಷ್ಟು ಬಿಜೆಪಿ ಕಾರ್ಯಕರ್ತರು ಸದಸ್ಯತ್ವ ತೆಗೆದುಕೊಂಡಿದ್ದಾರೆ ಎಂದು ಡಿಕೆಶಿ ಹೇಳಿದರು.
ಪಾವಗಡ ಸೋಲಾರ್ ಹಗರಣ ಆರೋಪ ವಿಚಾರದ ಕುರಿತು ಮಾತನಾಡಿದ ಡಿಕೆಶಿ, ಪಾವಗಡ ಆದ್ರೂ ತೋರಿಸ್ಲೀ ಏನೂ ಬೇಕಾದ್ರೂ ತೋರಿಸ್ಲಿ. ಯಾವ ತನಿಖೆ ಬೇಕಾದ್ರೂ ಮಾಡಲಿ. ತಪ್ಪು ಮಾಡಿದ್ರೆ ಕತ್ತು ಕೊಡಕ್ಕೂ ನಾನು ತಯಾರಿದ್ದೇನೆ. ನಮ್ಮ ಸರ್ಕಾರ ಇರುವಾಗ ರಾಜ್ಯ ಹೇಗಿತ್ತು ಈಗ ಹೇಗಿದೆ? ನಮ್ಮ ಸರ್ಕಾರ ಇರುವಾಗ ಎಷ್ಟು ಪವರ್ ಜನರೇಟ್ ಮಾಡಿದ್ದೇವೆ. ಎಲ್ಲಾ ದಾಖಲೆ ನನ್ನಲ್ಲಿ ಇದೆ ಎಂದು ಸ್ಪಷ್ಟೀಕರಣ ನೀಡಿದರು.
ಕರಾವಳಿಯಲ್ಲಿ ಪಕ್ಷ ಸಂಘಟನೆ ವಿಚಾರವಾಗಿ ಮಾತನಾಡಿದ ಶಿವಕುಮಾರ್, ಕರಾವಳಿಗೆ ಪ್ರತ್ಯೇಕ ಮ್ಯಾನುಫೆಸ್ಟೋ ಕೊಡ್ತಿದ್ದೇವೆ. ಉದ್ಯೋಗ ಸೃಷ್ಟಿಗೆ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಜನರು ವಲಸೆ ಹೋಗುವುದನ್ನ ತಡೆಯಬೇಕು. ಕರಾವಳಿಯ ಯುವಕರು ಕೆಲಸ ಕೊಡುವವರು ಹೊರತು ಬೇರೆಯವರ ಕೆಳಗೆ ಕೆಲಸ ಮಾಡುವವರಲ್ಲ. ಹೀಗಾಗಿ ಉದ್ಯೋಗ ಸೃಷ್ಟಿ ಮಾಡಲು ಪ್ರತ್ಯೇಕ ಪ್ರಣಾಳಿಕೆ ಕರಾವಳಿಯಿಂದ ಕಾರವಾರದವರೆಗೂ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.
PublicNext
21/05/2022 10:52 am