ಉಡುಪಿ: ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ಮೇ 10ರಂದು ಉಡುಪಿಯಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಪದಾಧಿಕಾರಿಗಳ ಸಭೆ ಕಿದಿಯೂರು ಹೋಟೆಲ್ ನ ಮಾಧವ ಕೃಷ್ಣ ಸಭಾಭವನದಲ್ಲಿ ನಡೆಯಲಿದ್ದು ರಾಜ್ಯಾದ್ಯಂತ 77 ಮಂದಿ ಆಹ್ವಾನಿತರು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ರಾಜ್ಯದ ಹಾಗೂ ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹಾಗೂ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಉಡುಪಿ ನಗರ ಸರ್ವಿಸ್ ಬಸ್ಟ್ಯಾಂಡ್ ಬಳಿಯ ಗಾಂಧೀಜಿ ಪ್ರತಿಮೆಗೆ ಹೂ ಹಾರ ಹಾಕಿ ಕಿದಿಯೂರು ಹೋಟೆಲ್ ನಿಂದ ಸಭಾಂಗಣದವರೆಗಿನ ಮೆರವಣಿಗೆಯಲ್ಲಿ ರಾಜ್ಯ ಪದಾಧಿಕಾರಿಗಳನ್ನು ಕರೆತರಲಾಗುವುದು.ಚುನಾವಣೆಗೆ ಇನ್ನು 11 ತಿಂಗಳು ಮಾತ್ರ ಬಾಕಿ ಇದ್ದು, ಈ ಸಭೆ ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಪರವಾದ ವಾತಾವರಣ ಉಂಟು ಮಾಡಲಿದೆ.
ಉಡುಪಿಯಲ್ಲಿ ರಾಜ್ಯ ಪದಾಧಿಕಾರಿಗಳ ಸಭೆ ಮೊದಲ ಬಾರಿ ನಡೆಯಲಿದ್ದು, ಕಾರ್ಯಕರ್ತರಲ್ಲಿ ಹುಮ್ಮಸ್ಸು ಉಂಟುಮಾಡಿದೆ. ಉಡುಪಿ ನಗರ ಸಿಂಗಾರಗೊಳ್ಳಲಿದ್ದು ಎಲ್ಲೆಡೆ ಬಿಜೆಪಿ ಧ್ವಜಗಳು ರಾರಾಜಿಸಲಿದೆ. ರಾಜ್ಯದ ನಾಯಕರನ್ನು ಸ್ವಾಗತಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ ಎಂದು ಅವರು ಮಾಹಿತಿ ನೀಡಿದರು.
Kshetra Samachara
06/05/2022 02:20 pm