ಮಂಗಳೂರು: ಕಾಂಗ್ರೆಸ್ ನವರು ಸಂಪರ್ಕದಲ್ಲಿದ್ದಾರೆ ಎಂಬ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಮಂಗಳೂರಲ್ಲಿ ಮಾತನಾಡಿದ ಅವರು, ನಳಿನ್ ಡಾಲರ್ ಗೆ 20 ರೂ. ಮಾಡ್ತೇನೆ ಅಂತ ಹೇಳಿದ್ದಾರೆ.
ಮರಳನ್ನು 2 ಸಾವಿರಕ್ಕೆ, ಪೆಟ್ರೋಲ್ ಬೆಲೆ ಕಡಿಮೆ ಮಾಡ್ತೇವೆ ಹೇಳಿದ್ರು. ಇದರಲ್ಲಿ ಏನಾದ್ರೂ ಆಯ್ತಾ? ಅಂತಹ ಬಹಳಷ್ಟು ಹೇಳಿಕೆ ಬಂದಿದೆ. ದ.ಕ. ಜಿಲ್ಲೆಗೆ ಕುಚ್ಚಲಕ್ಕಿ ಮುಟ್ಟಿಸ್ತೇವೆ, ಅದು ಎಲ್ಲಿದೆ, ಬಂದಿದ್ಯಾ ? ಕರಾವಳಿಗೆ ಪ್ರತ್ಯೇಕ ಮರಳು ನೀತಿ ಹೇಳಿದ್ರು, ಕೊನೆಗೆ ನಮಗೆ ಮರಳೇ ಇಲ್ಲ! ಎಂದರು.
ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟಿಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಯು.ಟಿ.ಖಾದರ್, ಪಿಎಸ್ಸೈ ಅಕ್ರಮ ನೇಮಕ ಬಗ್ಗೆ ತಪ್ಪು ಮಾಡಿದವರ ಮೇಲೆ ಕ್ರಮ ಆಗಲಿ. ಅಧಿಕಾರಿಗಳ ಬೆಂಬಲ ಇಲ್ಲದೆ ಈ ನೇಮಕ ಸಾಧ್ಯವಿಲ್ಲ, ನೇಮಕಾತಿ ಮುಖ್ಯಸ್ಥ ಯಾರು? ಇದನ್ನು ತನಿಖೆ ಮಾಡಿ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವ ಬದಲು ಪ್ರಿಯಾಂಕ್ ಖರ್ಗೆಗೆ ನೋಟಿಸ್ ಮಾಡ್ತಾರೆ. ಈ ಬೆದರಿಕೆಗೆ ಕಾಂಗ್ರೆಸ್ ಬಗ್ಗಲ್ಲ.
ಪಿಡಬ್ಲ್ಯುಡಿಯಲ್ಲೂ ಬ್ಲೂಟೂತ್ ಬಳಸಿರೋದು ಬೆಳಕಿಗೆ ಬಂದಿದೆ. ಬಿಜೆಪಿ ಸರ್ಕಾರ ಇರೋವಾಗಲೇ ಇದೆಲ್ಲ ಯಾಕೆ ಆಗುತ್ತೆ. ಇಲಾಖೆ ಮೇಲೆಯೇ ಈ ಬಗ್ಗೆ ತನಿಖೆ ಆಗಲಿ, ಮುಖ್ಯಸ್ಥರನ್ನ ಕರೆಸಿ ಕೇಳಲಿ. ಪೊಲೀಸರ ಮೇಲೆ ಪೊಲೀಸ್ ಇಲಾಖೆಯೇ ತನಿಖೆ ಮಾಡಿದ್ರೆ ನ್ಯಾಯ ಸಿಗುತ್ತಾ? ನ್ಯಾಯಾಂಗ ತನಿಖೆ, ನಿವೃತ್ತ ನ್ಯಾಯಾಧೀಶರ ಮೂಲಕ ಅಥವಾ ಸಿಬಿಐ ತನಿಖೆಯಾಗಲಿ.
ಪೊಲೀಸ್ ಇಲಾಖೆಗೆ ಸಿಗದ್ದು ರಾಜಕೀಯ ನಾಯಕರಿಗೆ ಸಿಗುತ್ತೆ ಅಂದ್ರೆ ಅದು ಸರ್ಕಾರದ ವೈಫಲ್ಯ. ಸಾಕ್ಷ್ಯವನ್ನು ಅವರಿಗೆ ಕೊಡಲೇಬೇಕು ಅಂತ ಏನೂ ಇಲ್ಲ. ಇದಕ್ಕೂ ಮುನ್ನ ಆರೋಪ ಮಾಡಿದ ಎಲ್ಲರಿಗೂ ನೋಟಿಸ್ ಜಾರಿಯಾಗಿದ್ಯಾ? ಪ್ರಿಯಾಂಕ್ ಖರ್ಗೆಗೆ ನೋಟಿಸ್ ಕಳಿಸಿರೋದು ಅವರು ತಪ್ಪು ಮಾಡಿದ್ದಾರೆ ಅಂತ ಬಿಂಬಿಸೋ ಪ್ರಯತ್ನ. ಈ ಮೂಲಕ ಸರ್ಕಾರದ ವೈಫಲ್ಯ ಮುಚ್ಚಿ ಹಾಕುವ ಯತ್ನವಾಗಿದೆ. ನೇಮಕಾತಿ ಮುಖ್ಯಸ್ಥರ ಮೇಲೆ ಯಾವ ಕ್ರಮ ಆಗಿದೆ. ಅವರಿಗೆ ನೋಟಿಸ್ ಜಾರಿ ಮಾಡಿ ಸಿಐಡಿಯವರು ಕರೆದಿದ್ದಾರಾ? ಎಂದು ಪ್ರಶ್ನಿಸಿದರು.
Kshetra Samachara
25/04/2022 07:59 pm