ಮಂಗಳೂರು: ಕಾನೂನು ವಿದ್ಯಾರ್ಥಿಗಳು ಹಿರಿಯರ ಆದರ್ಶಗಳನ್ನು ಪಾಲಿಸುವುದಲ್ಲದೆ ಪ್ರಸ್ತುತದ ಜ್ವಲಂತ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಬೇಕೆಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಸುಭಾಶ್ ಆಡಿ ಹೇಳಿದರು.
ನಗರದ ಕೆನರಾ ಕಾಲೇಜಿನಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜಿಸಿರುವ ಎರಡು ದಿನಗಳ ಕಾನೂನು ವಿದ್ಯಾರ್ಥಿಗಳ ರಾಜ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಈ ನಾಡಿನ ವಿಶ್ವದರ್ಜೆಯ ವಕೀಲರು ತಮ್ಮ ಸರ್ವಸ್ವವನ್ನೂ ಧಾರೆ ಎರೆದಿದ್ದಾರೆ. ಅವರೆಲ್ಲರ ಪರಿಶ್ರಮದ ಫಲವಾಗಿ ನಮಗಿಂದು ಉತ್ತಮ ಸಂವಿಧಾನ ಹಾಗೂ ಅತ್ಯಂತ ಬೃಹತ್ ಪ್ರಜಾಪ್ರಭುತ್ವದ ರಾಷ್ಟ್ರನಿರ್ಮಣ ಸಾಧ್ಯವಾಯಿತು ಎಂದರು.
ಪ್ರಚಲಿತ ವಿದ್ಯಮಾನಗಳ ಅವಲೋಕನಕ್ಕೆ ಕಾನೂನು ವಿದ್ಯಾಲಯಗಳು ಮಹತ್ವ ನೀಡಬೇಕು. ವಿದ್ಯಾರ್ಥಿಗಳು ತಮ್ಮ ವ್ಯಾಸಂಗವನ್ನು ಪೂರ್ಣಗೊಳಿಸುವ ಸಮಯಕ್ಕೆ ಮೌಲ್ಯಯುತ ವೃತ್ತಿಪರರಾಗಿ ನಿರ್ಮಾಣಗೊಳ್ಳುವಂತಹ ಪಠ್ಯೇತರ ಚಟುವಟಿಕೆಗಳನ್ನು ಜೋಡಿಸಿಕೊಳ್ಳಬೇಕು. ಕಾನೂನು ವಿದ್ಯಾರ್ಥಿಗಳು ವಿಮರ್ಶಾತ್ಮಕ ಗುಣಕ್ಕೆ ಸೀಮಿತವಾಗಿರಬಾರದು. ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಅರಿತು ಕಾರ್ಯಪ್ರವೃತ್ತರಾಗಬೇಕು. ತಂತ್ರಜ್ಞಾನದ ಯುಗದಲ್ಲಿ ಮಾಹಿತಿಗೆ ಕೊರತೆಯಿಲ್ಲ. ಅವುಗಳನ್ನು ಪಡೆಯುವ ಕೌಶಲ್ಯ ವಿದ್ಯಾರ್ಥಿಗಳಲ್ಲಿರಬೇಕು ಎಂದರು.
Kshetra Samachara
15/04/2022 06:55 pm