ಮಂಗಳೂರು: ಬಿಜೆಪಿಯವರಿಗೆ ಅವರದ್ದೇ ಕಾರ್ಯಕರ್ತರನ್ನು ರಕ್ಷಿಸಲು ಆಗುತ್ತಿಲ್ಲ ಎಂದು ಮಂಗಳೂರಿನಲ್ಲಿ ವಿರೋಧ ಪಕ್ಷದ ಉಪನಾಯಕ ಯು.ಟಿ.ಖಾದರ್ ಕಿಡಿಕಾರಿದ್ದಾರೆ.
ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂತ್ರಿಯ ಮೇಲೆ ಎಫ್‌ಐಆರ್ ಆದಾಗ ನಿಷ್ಪಕ್ಷಪಾತ ತನಿಖೆ ಆಗಬೇಕು. ಪೊಲೀಸ್ ಅಧಿಕಾರಿಗಳಿಗೆ ಸ್ವತಂತ್ರ ತನಿಖೆ ಮಾಡಲು ಮಂತ್ರಿಗಳು ರಾಜೀನಾಮೆ ಕೊಟ್ಟ ಇತಿಹಾಸವೇ ಇದೆ. ಆದರೆ ಕೆ.ಎಸ್.ಈಶ್ವರಪ್ಪ ರಾಜೀನಾಮೆ ಕೊಡದಿರುವುದು ದೇಶದಲ್ಲಿ ಬಿಜೆಪಿ ಮುಖವಾಡ ಬಯಲು ಮಾಡಿದೆ ಎಂದು ಕಿಡಿಕಾರಿದರು.
ಇದೊಂದು ಕೆಟ್ಟ ಸಂಪ್ರದಾಯಕ್ಕೆ ಬಿಜೆಪಿ ಇವತ್ತು ನಾಂದಿ ಹಾಡಿದೆ. ಇದರಿಂದ ಜನರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತದ ತೂಕ ಗೊತ್ತಾಗಿದೆ. ಕೆ.ಜೆ.ಜಾರ್ಜ್ ತಮ್ಮ ಮೇಲೆ ಆರೋಪ ಬಂದಾಗ ರಾಜೀನಾಮೆ ಕೊಟ್ಟರು. ಅಲ್ಲದೇ ಇಡೀ ಪ್ರಕರಣವನ್ನು ಆಗ ಸಿಬಿಐಗೆ ವಹಿಸಿದ್ದರು. ಆಗ ಕಾನೂನು ಬೇರೆ, ಈಗ ಕಾನೂನು ಬೇರೆ ಆಗಿದ್ಯಾ? ಎಂದು ಪ್ರಶ್ನೆ ಮಾಡಿದರು.
ಜನರಿಗೊಂದು ಕಾನೂನು ಹಾಗೂ ಬಿಜೆಪಿ ನಾಯಕರಿಗೊಂದು ಕಾನೂನು ಇದ್ಯಾ? ಪ್ರತಿಯೊಂದರಲ್ಲೂ ಬಿಜೆಪಿ ರಾಜಕೀಯ ಮಾಡುವ ಕೆಲಸ ಮಾಡ್ತಿದೆ. 40% ಕಮಿಷನ್ ಬಗ್ಗೆ ವರ್ಷದ ಹಿಂದೆಯೇ ಗುತ್ತಿಗೆದಾರರ ಸಂಘ ಪತ್ರ ಬರೆದಿತ್ತು. ಪ್ರಧಾನಿ ಮತ್ತು ಸಿಎಂಗೆ ಪತ್ರ ಬರೆದಿದ್ದರೂ ಒಂದೇ ಒಂದು ಉತ್ತರ ಇಲ್ಲ. ಅಸೆಂಬ್ಲಿಯ ನಿಲುವಲ್ಲಿ ಸೂಚನೆ ಮೇಲೆ ಚರ್ಚೆಗೂ ಸರ್ಕಾರ ಅವಕಾಶ ಕೊಟ್ಟಿಲ್ಲ. ಹೀಗಾಗಿ ತಕ್ಷಣ ಈಶ್ವರಪ್ಪ ರಾಜೀನಾಮೆ ಕೊಡಬೇಕು, ಕುಟುಂಬಕ್ಕೆ ಪರಿಹಾರ ಕೊಡಬೇಕು. ವರ್ಕ್ ಆರ್ಡರ್ ಮತ್ತು ಆತ್ಮಹತ್ಯೆಗೆ ಸಂಬಂಧ ಕಲ್ಪಿಸಬೇಡಿ. ಅಲ್ಲಿ ಕೆಲಸ ಆಗುತ್ತಿದ್ದಾಗ ಸಿಇಓ ಮತ್ತು ಅಲ್ಲಿನ ಅಧಿಕಾರಿಗಳು ಸತ್ತಿದ್ರಾ? ಸರ್ಕಾರಿ ಜಾಗದಲ್ಲಿ ಯಾರೋ ಒಬ್ಬ ಕೆಲಸ ಮಾಡಿದಾಗ ಬಿಡ್ತಾರಾ? ಅಲ್ಲಿನ ಇಂಜಿನಿಯರ್ ಹಾಗೂ ಬೇರೆ ಅಧಿಕಾರಿಗಳು ಏನ್ ಮಾಡ್ತಾ ಇದ್ರು ಎಂದು ಪ್ರಶ್ನಿಸಿದರು.
ಸಂತೋಷ್ ಪಾಟೀಲ ಮನೆ ಕೆಲಸ ಮಾಡಿದ್ದಾ? ಪಂಚಾಯತ್ ರಾಜ್ ಇಲಾಖೆ ಕೆಲಸ ಮಾಡಿದ್ದು. ಈ ಬಗ್ಗೆ ಸೂಕ್ತ ತನಿಖೆ ಆಗಲಿ, ಸತ್ಯಾಂಶ ಇಲ್ಲದೇ ಇದ್ರೆ ಮತ್ತೆ ಸ್ಥಾನಕ್ಕೆ ಬರಲಿ. ಕಾಂಗ್ರೆಸ್ ಸಾವಿನ ಮನೆಯಲ್ಲಿ ರಾಜಕೀಯ ಮಾಡಲು ಹೋಗಲ್ಲ ಎಂದರು.
PublicNext
14/04/2022 03:18 pm