ಮಂಗಳೂರು: ಕಾಂಗ್ರೆಸ್ ನವರದ್ದು ಊರಿಗೆ ಮನುಷ್ಯರಲ್ಲ ಸ್ಮಶಾನಕ್ಕೆ ಹೆಣ ಅಲ್ಲ ಎಂಬಂತಹ ಸ್ಥಿತಿಯಾಗಿದೆ. ಹಿಜಾಬ್ ಪರವಾಗಿ ನಾವಿದ್ದೇವೆ ಹೇಳಲು ಡಿ.ಕೆ.ಶಿವಕುಮಾರ್ ಬಿಡುತ್ತಿಲ್ಲ. ಹಿಂದೂ ಪರ ಇದ್ದೇವೆ ಅನ್ನಲು ಸಿದ್ದರಾಮಯ್ಯ ಬಿಡುತ್ತಿಲ್ಲ. ಆದ್ದರಿಂದ ಈಶ್ವರಪ್ಪನವರ ವಿರುದ್ಧ ಸದನದಲ್ಲಿ ನಡೆಯುತ್ತಿರುವ ಪ್ರತಿಭಟನೆ ಸಿದ್ದರಾಮಯ್ಯ - ಡಿಕೆಶಿ ನಡುವಿನ ಫೈಟ್ ಅಷ್ಟೇ ಎಂದು ಮಂಗಳೂರಿನಲ್ಲಿ ಇಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಕಾಂಗ್ರೆಸ್ ಅಹೋರಾತ್ರಿ ಧರಣಿ ವಿಚಾರವಾಗಿ ಮಾತನಾಡಿದ ಅವರು, ಹಿಜಾಬ್ ಬಗ್ಗೆ ವಿಧಾನಸಭೆಯ ಅಧಿವೇಶನದಲ್ಲಿ ಚರ್ಚೆಯಾಗಬೇಕಿತ್ತು. ಈ ಬಗ್ಗೆ ಕಾಂಗ್ರೆಸ್ ನವರು ಪ್ರಸ್ತಾವ ಮಾಡಬೇಕಿತ್ತಲ್ಲ. ವಿಧಾನಸಭೆ ಅಧಿವೇಶನ ಜನರ ಸಮಸ್ಯೆಗಳ ಪರಿಹಾರಕ್ಕೆ ನಡೆಯೋದು. ಆದ್ದರಿಂದ ಕೋಟ್ಯಂತರ ಮಂದಿ ವಿದ್ಯಾರ್ಥಿಗಳು ಶಾಲಾ - ಕಾಲೇಜುಗಳಿಗೆ ಹೋಗಬೇಕು. ಅವರು ಶಿಕ್ಷಣ ಪಡೆಯಬೇಕೆಂಬ ಕಾಳಜಿ ಕಾಂಗ್ರೆಸ್ ನವರಿಗೆ ಬೇಕಿತ್ತು ಎಂದು ಹೇಳಿದರು.
ಈ ಬಗ್ಗೆ ಕಾಂಗ್ರೆಸ್ ನವರಿಗೆ ಕಾಳಜಿ ಎಲ್ಲಿದೆ. ಇದ್ದಲ್ಲಿ ಅವರು ಹಿಜಾಬ್, ಕೇಸರಿ ಬಗ್ಗೆ ಅವರು ಚರ್ಚೆ ಎತ್ತಬೇಕಿತ್ತಲ್ಲ. ಆದರೆ ಈ ಬಗ್ಗೆ ಚರ್ಚೆ ಮಾಡಿದರೆ ಓಟು ಹೋಗುತ್ತದೆ ಎಂಬ ಭೀತಿಯಲ್ಲಿ ಅವರು ಚರ್ಚೆ ಎತ್ತುತ್ತಿಲ್ಲ. ಓಟು ಕಳೆದುಕೊಳ್ಳುವ ಕೆಲಸ ಮಾಡಬಾರದೆನ್ನುವ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷ ತೀರ್ಮಾನ ಮಾಡಿದೆ. ಅದಕ್ಕೆ ಕಾಂಗ್ರೆಸ್ ವರು ಈಶ್ವರಪ್ಪನವರನ್ನು ಹಿಡಿದುಕೊಂಡಿದ್ದಾರೆ. ಈ ಧರಣಿಯಲ್ಲಿ ಬಡವರ ಪ್ರಶ್ನೆ ಏನು ಬಂತು. ಬರೀ ಸ್ವಾರ್ಥವಿದೆಯಷ್ಟೇ ಈಶ್ವರಪ್ಪ - ಡಿಕೆಶಿ - ಸಿದ್ದರಾಮಯ್ಯ ಬಿಟ್ಟು ಬೇರೇನು ಇಲ್ಲ. ಈ ಮೂವರಿಗೋಸ್ಕರ ಸದನ ನಿಲ್ಲುತ್ತಿದೆ. ಸದನಕ್ಕೆ ದಿನಕ್ಕೆ ಕೋಟ್ಯಂತರ ರೂ. ಖರ್ಚು ಬೀಳುತ್ತದೆ. ಜನರ ದುಡ್ಡು ತೆಗೆದುಕೊಂಡು ಸದನದಲ್ಲಿ ಆರಾಮದಲ್ಲಿ ನಿದ್ದೆ ಹೊಡೆದರೆ ಏನು ಅರ್ಥ ಬರುತ್ತದೆ. ಇದು ಜನರಿಗೆ ಮೋಸ ಮಾಡಿದಂಥಲ್ಲವೇ. ಕಾಂಗ್ರೆಸ್ ನವರಿಗೆ ಬುದ್ಧಿ, ಮರ್ಯಾದೆ ಏನಾದರೂ ಇದ್ದಲ್ಲಿ ಜನರ ದುಡ್ಡು ತೆಗೆದುಕೊಂಡು, ಟಿಎ- ಡಿಎ ತೆಗೆದುಕೊಂಡು ಅವರ ವಿಷಯವನ್ನೇ ಸದನದಲ್ಲಿ ಎತ್ತದೆ ತೋಳು ಏರಿಸೋದು, ಬಡಿದಾಡುತ್ತಿದ್ದಾರೆ.
ಕೆಂಗಲ್ ಹನುಮಂತಯ್ಯನವರು ವಿಧಾನಸಭೆಯನ್ನು ಬಡವರಿಗೋಸ್ಕರ ಕಟ್ಟಿಸಿರೋದು ಹೊರತು ಕುಸ್ತಿ ಆಡೋಕ್ಕಲ್ಲ. ಆದ್ದರಿಂದ ಹಿಜಾಬ್ ಬಗ್ಗೆ, ಕೇಸರಿ ಶಾಲು ಬಗ್ಗೆ ಕಾಂಗ್ರೆಸ್ ನವರು ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ. ವಿದ್ಯಾರ್ಥಿಗಳು ಮತ್ತೆ ಶಾಲೆ ಕಾಲೇಜುಗಳಿಗೆ ಹೋಗಬೇಕು. ಶಾಲೆಗೆ ಹೋಗೋದು ವಿದ್ಯಾಭ್ಯಾಸಕ್ಕೇ ಹೊರತು ಮತ ಪ್ರಚಾರಕ್ಕಲ್ಲ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಲಿ. ವ್ಯವಸ್ಥೆಯನ್ನು ಕೊಡುವ ತೀರ್ಮಾನವನ್ನು ಕೊಡುವ ವೇದಿಕೆ ವಿಧಾನಸಭೆ. ಅಂತಹ ವಿಧಾನಸಭೆಗೆ ಅಗೌರವವನ್ನು ಮಾಡುವ ಕಾರ್ಯವನ್ನು ಕಾಂಗ್ರೆಸ್ ಮಾಡುತ್ತದೆ. ಆದ್ದರಿಂದ ಜನರು ಈಗಾಗಲೇ ಕಾಂಗ್ರೆಸ್ ನವರನ್ನು ಈಗಾಗಲೇ ದೇಶದಿಂದ ಓಡಿಸಿದ್ದಾರೆ ಮುಂದಿನ ದಿನಗಳಲ್ಲಿ ಹಿಡಿದುಕೊಂಡಿದ್ದಾರೆ ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.
PublicNext
19/02/2022 12:26 pm