ಸುರತ್ಕಲ್: ಸಾಮಾಜಿಕ ಹೋರಾಟಗಾರ ಆಸಿಫ್ ಆಪತ್ಬಾಂಧವ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಎನ್ಐಟಿಕೆ ಅಕ್ರಮ ಟೋಲ್ ಗೇಟ್ ವಿರುದ್ಧದ ಅಹೋರಾತ್ರಿ ಧರಣಿಯು ರವಿವಾರ ಏಳನೇ ದಿನಕ್ಕೆ ಕಾಲಿರಿಸಿದೆ.
ರಾಜ್ಯ ಚಾಲಕರ ಒಕ್ಕೂಟ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧ್ಯಕ್ಷ ಸತೀಶ್ ಆಚಾರ್ಯ ಅವರು ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಬಡ ಚಾಲಕರನ್ನು ಬೆದರಿಸಿ ಹಣ ಪಡೆಯುತ್ತಾರೆ. ನ್ಯಾಯ ಪ್ರಶ್ನಿಸಿದರೆ ಮಾರಕಾಸ್ತ್ರ ಹಿಡಿದು ಚಾಲಕರ ಮೇಲೆಯೇ ಹಲ್ಲೆ ಮಾಡಲು ಮುಂದಾಗುತ್ತಾರೆ, ಆದ್ದರಿಂದ ಇಲ್ಲಿನ ಟೋಲ್ ಗೇಟ್ ಸಿಬ್ಬಂದಿಯ ಗೂಂಡಾಗಿರಿಯನ್ನು ಆದಷ್ಟು ಬೇಗ ನಿಲ್ಲಿಸಬೇಕಾಗಿದೆ. ಮುಂದೆ ಬರುವ ಎಲ್ಲ ಹೋರಾಟದಲ್ಲೂ ಆಸಿಫ್ ಆಪತ್ಬಾಂಧವ ಅವರ ಜೊತೆ ನಾವೆಲ್ಲ ಭಾಗಿಯಾಗುತ್ತೇವೆ ಎಂದರು. ಗೌರವಧ್ಯಕ್ಷ ಸತೀಶ್ ದೇವಾಡಿಗ, ಕಾರ್ಯದರ್ಶಿ ರೋನಿ ಹಾಗೂ ಸದಸ್ಯರು ಧರಣಿ ವೇದಿಕೆಯಲ್ಲಿ ಪಾಲ್ಗೊಂಡರು.
ಕಿನ್ನಿಗೋಳಿ ವಲಯ ಬಸ್ ಚಾಲಕ-ನಿರ್ವಾಹಕರ ಸಂಘದ ಗೌರವಾಧ್ಯಕ್ಷ ಭಾಸ್ಕರ್ ಪೂಜಾರಿ, ಅಧ್ಯಕ್ಷ ರಾಮ್ ಪ್ರಸಾದ್ ಶೆಟ್ಟಿ, ಕಾರ್ಯದರ್ಶಿ ಹರೀಶ್ ಹಾಗೂ ಸದಸ್ಯರುಗಳು ಹೋರಾಟವನ್ನು ಉದ್ದೇಶಿಸಿ ಮಾತನಾಡಿ, ನಿಮ್ಮ ನಿಸ್ವಾರ್ಥ ಹೋರಾಟದಲ್ಲಿ ನಾವು ಕೂಡ ಸದಾ ಭಾಗಿಯಾಗಿರುತ್ತೇವೆ ಎಂದು ಬೆಂಬಲ ವ್ಯಕ್ತಪಡಿಸಿದರು.
ಈ ಮಧ್ಯೆ ಆಸಿಫ್ ಅವರ ಆರೋಗ್ಯ ಏರುಪೇರಾಗಿದೆ. ಸಾಯಂಕಾಲ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತಿದಾಗ ಅಧಿಕಾರಶಾಹಿಗಳಿಂದ ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಈ ಕಾರಣಕ್ಕಾಗಿ ತನ್ನ ಅಸೌಖ್ಯದ ಸ್ಥಿತಿಯಲ್ಲೂ ಕೈಕಾಲುಗಳಿಗೆ ಮತ್ತು ಬಾಯಿಗೆ ಸರಪಳಿಯಿಂದ ಬಂಧನ ಮಾಡಿ ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿದರು.
Kshetra Samachara
13/02/2022 09:20 pm