ಮಂಗಳೂರು: ಹಿಜಾಬ್ ವಿವಾದವು ರಾಜ್ಯಾದ್ಯಂತ ಸಾಕಷ್ಟು ಗೊಂದಲ ಸೃಷ್ಟಿಸಿದರೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ತಮ್ಮದೇ ಕ್ಷೇತ್ರದಲ್ಲಿ ಹಿಜಾಬ್ ವಿವಾದ ಬುಗಿಲೆದ್ದಿದ್ದರೂ ಮಾಧ್ಯಮದವರು ಹಿಜಾಬ್ ವಿವಾದದ ಬಗ್ಗೆ ಕೇಳಿರುವ ಪ್ರಶ್ನೆಗೆ ಮಾತ್ರ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಉತ್ತರಪ್ರದೇಶದ ಚುನಾವಣೆ ಬಗ್ಗೆ ಮಾತನಾಡಿದ ಶೋಭಾ ಕರಂದ್ಲಾಜೆಯವರು, ಉತ್ತರಪ್ರದೇಶದಲ್ಲಿ ಮೊದಲನೆಯ ಹಂತದ ಚುನಾವಣೆ ಇಂದು ನಡೆದಿದೆ. ಯುಪಿಯಲ್ಲಿ ಬಿಜೆಪಿಗೆ ದೊಡ್ಡ ಪ್ರಮಾಣದ ಬೆಂಬಲ ಕಂಡುಬರುತ್ತಿದೆ. ಉತ್ತರ ಪ್ರದೇಶದಲ್ಲಿ ಮೋದಿ ಹಾಗೂ ಯೋಗಿಯವರ ಹೆಸರು ಮೊಳಗುತ್ತಿದೆ.
ಅವರ ನಾಮಬಲ, ಅಭಿವೃದ್ಧಿಪರ ಕಾರ್ಯ, ಕಾನೂನು ಸುವ್ಯವಸ್ಥೆ ಸರಿಪಡಿಸಿರುವ ಕೆಲಸ ಜನರ ಮನಸ್ಸನ್ನು ಗೆದ್ದಿದೆ. ನನ್ನ ವಿಭಾಗದ ಚುನಾವಣೆ ಫೆ.23,27 ಹಾಗೂ ಮಾ.3ರಂದು ನಡೆಯಲಿದೆ. ಅವಧ್ ಕ್ಷೇತ್ರ ಬಿಜೆಪಿಗೆ ಭದ್ರ ನೆಲೆಯನ್ನು ಕೊಟ್ಟಿರುವ ಕ್ಷೇತ್ರ. ಆದ್ದರಿಂದ ಆ ಕ್ಷೇತ್ರದಲ್ಲೂ ಬಿರುಸಿನಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ.
ತಳಹಂತದ ಸಂಘಟನೆಗೆ ಒತ್ತು ನೀಡಿದ್ದು, ಬಹಳ ದೊಡ್ಡ ಅಂತರದಲ್ಲಿ ಯೋಗಿ ಸರಕಾರ ಮತ್ತೆ ಬರುವ ನಮಗೆ ವಿಶ್ವಾಸವಿದೆ. ಅಲ್ಲಿನ ಮನೆಮನೆಯಲ್ಲೂ ಅಭಿವೃದ್ಧಿಪರ ಕಾರ್ಯ ಆಗಿದೆ. ಆದ್ದರಿಂದ ಜನರು ಇದನ್ನು ಮಾತನಾಡುತ್ತಿದ್ದು, ನಮ್ಮೆಲ್ಲರಿಗೂ ಪ್ರಚಾರ ಮಾಡಲು ಬಹಳ ಸಂತೋಷವಾಗಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು.
Kshetra Samachara
12/02/2022 11:52 am