ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ಸಂವಿಧಾನ ಸಂರಕ್ಷಣಾ ಜಾಗೃತಿ ಸಮಿತಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ದಲಿತ ಹಕ್ಕುಗಳ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಫೆ 7 ರಂದು ಅಳದಂಗಡಿ ಯಿಂದ ಹೊರಟ ಸಂವಿಧಾನ ಸಂರಕ್ಷಣೆ ಜಾಗೃತಿ ಜಾಥಾ ರಥ ಫೆ. 8 ರಂದು ಸುಳ್ಯ ಖಾಸಗಿ ಬಸ್ಸು ನಿಲ್ದಾಣ ಬಳಿ ಬರುತ್ತಿದ್ದಂತೆ ಸುಳ್ಯದ ಕಾರ್ಯಕರ್ತರು ರಥವನ್ನು ಸ್ವಾಗತಿಸಿದರು.
ಫೆಬ್ರವರಿ7 ಮತ್ತು 8ರಂದು ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸಂಚರಿಸಿದ ಈ ರಥವು ಸಂವಿಧಾನ ಸಂರಕ್ಷಿಸೋಣ ಬಹುತ್ವ ಭಾರತ ಉಳಿಸೋಣ ಎಂಬ ಘೋಷಣೆಯೊಂದಿಗೆ ಸಂಘಟಕರ ಮುಖಂಡರು ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಮ್ಯುನಿಸ್ಟ್ ಮುಖಂಡ ನ್ಯಾಯವಾದಿ ಬಿಎಂ ಭಟ್ ಪವಿತ್ರ ಸಂವಿಧಾನವನ್ನು ಉಳಿಸಿ ರಕ್ಷಿಸಿದರೆ ಮಾತ್ರ ಬಹುತ್ವ ಸಮಗ್ರ ಭಾರತವನ್ನು ಉಳಿಸಲು ಸಾಧ್ಯ ಎಂದು ಹೇಳಿದರು. ಭಾರತೀಯರಾದ ನಾವು ಸಮಾನವರಾಗಿ ಬದುಕಲು ಕಲಿಯಬೇಕು. ಸಮಾನತೆ ವ್ಯಕ್ತಿಗೌರವ ಸ್ವಾತಂತ್ರ್ಯದ ಹಕ್ಕು ಕರ್ತವ್ಯಗಳನ್ನು ಹೊಂದಿದ ಸಂವಿಧಾನದ ನಡೆಯನ್ನು ಮರೆತಿರುವುದೇ ದೇಶದ ಇಂದಿನ ಅರಾಜಕತೆಗೆ ದ್ವೇಷ ಗಲಭೆಗಳಿಗೆ ಕಾರಣ ಎಂದು ಅವರು ಹೇಳಿದರು.
ರಥದ ಸ್ವಾಗತಕ್ಕೆ ಆಗಮಿಸಿದ ರಾಜ್ಯ ಜೆಡಿಎಸ್ ಸಮಿತಿ ಉಪಾಧ್ಯಕ್ಷ ಎಂಬಿ ಸದಾಶಿವ ಮಾತನಾಡಿ ಸಂವಿಧಾನದ ಮೌಲ್ಯವನ್ನು ಜನರಿಗೆ ಅರಿವು ಮೂಡಿಸಿ ಜಾಗೃತಿ ಮೂಡಿಸಬೇಕಿದೆ. ಈಗಿನ ಸರಕಾರಗಳು ನಮ್ಮ ನಮ್ಮ ನಡುವೆ ವೈರತ್ವವನ್ನು ಮೂಡಿಸಿ ಜನವಿರೋಧಿ ಕಾರ್ಮಿಕ ವಿರೋಧಿ ರೈತ ವಿರೋಧಿ ಕಾನೂನುಗಳನ್ನು ಜಾರಿ ಮಾಡಿ ಬಡವರ ಬದುಕುವ ಶಕ್ತಿಯನ್ನು ಕುಂದಿಸುವ ಕೆಲಸವನ್ನು ಮಾಡುತ್ತಿದೆ ಎಂದು ಅವರು ಹೇಳಿದರು. ಜಾತ್ಯತೀತ ರಾಷ್ಟ್ರವನ್ನು ರಕ್ಷಿಸಿದರೆ ಮಾತ್ರ ರಾಷ್ಟ್ರ ಅಭಿವೃದ್ಧಿಯ ಪಥದಲ್ಲಿ ಸಾಗಲು ಸಾಧ್ಯ ಎಂದು ಹೇಳಿದರು. ಕಾರ್ಮಿಕ ಸಂಘಟನೆಯ ಮುಖಂಡರಾದ ಎಲ್ ಮಂಜುನಾಥ್, ನಬಿಸ ಬೆಳ್ತಂಗಡಿ, ಹಾಗೂ ಕಾರ್ಮಿಕ ಸಂಘಟನೆಯ ಮುಖಂಡರುಗಳು ಉಪಸ್ಥಿತರಿದ್ದರು.
Kshetra Samachara
09/02/2022 08:59 pm