ಮೂಡುಬಿದಿರೆ: ರಾಯಚೂರು ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಗಣರಾಜ್ಯೋತ್ಸವದ ಸಂದರ್ಭದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿರುವುದನ್ನು ವಿರೋಧಿಸಿ, ಮೂಡುಬಿದಿರೆ ದಲಿತ ಹಕ್ಕುಗಳ ಸಮಿತಿ ವತಿಯಿಂದ ಸೋಮವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಬಹುಜನ ಚಿಂತಕ ಅಚ್ಯುತ ಸಂಪಿಗೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿ,ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರವನ್ನು ಬಲವಂತವಾಗಿ ತೆಗಿಸಿ ಅಸ್ಪೃಶ್ಯತೆ ಆಚರಿಸಿದ ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಅವರನ್ನು ಬಂಧಿಸಲು ಸರಕಾರ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಆದರೆ ಬಡವರಿಗೆ ದೀನ ದಲಿತರಿಗೆ, ಮಾತ್ರ ಕಾನೂನಡಿಯಲ್ಲಿ ಶಿಕ್ಷೆ ವಿಧಿಸಲಾಗುತ್ತದೆ. ಸರ್ಕಾರವು ನ್ಯಾಯಾಧೀಶರಿಗೂ ಕಾನೂನು ಕ್ರಮಕೈಗೊಂಡು ಹುದ್ದೆಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಇದೇ ಸಂದರ್ಭದಲ್ಲಿ ದಲಿತ ಹಕ್ಕು ಸಮಿತಿ ವತಿಯಿಂದ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರ ಅಮಾನತು ಕೋರಿ ತಹಶೀಲ್ದಾರ್ ಪುಟ್ಟರಾಜು ಅವರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ದಲಿತ ಹಕ್ಕುಗಳ ಸಮಿತಿ ಸಂಚಾಲಕ ಕೃಷ್ಣಪ್ಪ ಕೊಣಾಜೆ, ಸಿ.ಪಿ.ಐ.ಎಮ್ ಜಿಲ್ಲಾ ಕಾರ್ಯದರ್ಶಿ ಕೆ. ಯಾದವ ಶೆಟ್ಟಿ, ದ.ಕ ಜಿಲ್ಲಾ ದ.ಹ.ಸ. ರಾಧ, ಗಿರಿಜಾ, ಲಕ್ಷ್ಮೀ ಉಪಸ್ಥಿತರಿದ್ದರು.
ವೈಶಾಲಿ ಶೆಟ್ಟಿ, ಪೂವಾಳ
Kshetra Samachara
07/02/2022 06:55 pm