ಮುಲ್ಕಿ: ಅಂಬೇಡ್ಕರ್ ಯವಸೇನೆ (ರಿ) ತಾಲೂಕು ಶಾಖೆ ಮುಲ್ಕಿ ವತಿಯಿಂದಸಂವಿಧಾನ ಶಿಲ್ಪಿ ಡಾ,ಬಿ.ಆರ್. ಅಂಬೇಡ್ಕರ್ ರವರಿಗೆ ಆಗೌರವ ತೋರಿ ಅಪಮಾನ ಮಾಡಿದ ರಾಯಚೂರಿನ ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡರನ್ನು ಕರ್ತವ್ಯದಿಂದ ವಜಾಗೊಳಿಸುವಂತೆ ಆಗ್ರಹಿಸಿ ದಲಿತಪರ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ಸಭೆ ಮುಲ್ಕಿ ಬಸ್ಸುನಿಲ್ದಾಣದ ಬಳಿ ನಡೆಯಿತು.
ಪ್ರತಿಭಟನೆಯಲ್ಲಿ ಕಾಪು ತಾಲೂಕು ಅಂಬೇಡ್ಕರ್ ಯುವ ಸೇನೆ ಅಧ್ಯಕ್ಷ ಲೋಕೇಶ್ ಅಂಚನ್ ಮಾತನಾಡಿ ರಾಯಚೂರು ಜಿಲ್ಲಾ ಕೋರ್ಟ್ ಆವರಣದಲ್ಲಿ ನಡೆದ ಸಂವಿಧಾನ ಆಚರಣೆ ಹಾಗೂ ಗಣರಾಜ್ಯೋತ್ಸವ ದಿನದಂದು ಜಿಲ್ಲಾ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಗೌಡ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ರವರ ಭಾವಚಿತ್ರವನ್ನು ತಮ್ಮ ಪ್ರಭಾವ ಬಳಸಿ ಕಾರ್ಯಕ್ರಮದ ಮುಖ್ಯಸ್ಥರಿಂದ ತೆಗೆಸಿ ಅವಮಾನ ಮಾಡಿರುತ್ತಾರೆ. ಇದು ಅಕ್ಷಮ್ಯ ಅಪರಾಧವಾಗಿದ್ದು ಸಂವಿಧಾನ ಹುದ್ದೆಗೆ ಅಗೌರವ ಮತ್ತು ಅವಮಾನ ಮಾಡಿದ ನ್ಯಾಯಾಧೀಶರನ್ನು ದೇಶದ್ರೋಹದ ಪ್ರಕರಣ ದಾಖಲಿಸಿ ವೃತ್ತಿಯಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಮುಲ್ಕಿ ಆಪದ್ಬಾಂಧವ ಸಾಮಾಜಿಕ ಕಾರ್ಯಕರ್ತ ಆಸಿಫ್ ಮಾತನಾಡಿ ಭಾರತದ ಪ್ರಜಾಪ್ರಭುತ್ವದ ಬಹುಮುಖ್ಯ ನ್ಯಾಯಾಂಗ ವಾಗಿದ್ದು ಜಿಲ್ಲಾ ನ್ಯಾಯಾಧೀಶರಾಗಿ ಸಂವಿಧಾನದ ಬಗ್ಗೆ ಅಗೌರವ ತೋರಿದ ಮಲ್ಲಿಕಾರ್ಜುನ ಗೌಡರ ನಡೆ ಇಡೀ ನಾಗರಿಕ ಸಮಾಜಕ್ಕೆ ಆತಂಕ ತಂದೊಡ್ಡಿದೆ ಸಂವಿಧಾನದ ಪಿತಾಮಹ ಬಗ್ಗೆ ಪೂರ್ವಾಗ್ರಹಪೀಡಿತ ಮನಸ್ಥಿತಿ ಇರುವ ನ್ಯಾಯಾಧೀಶರಿಂದ ನಿಷ್ಪಕ್ಷಪಾತ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯವೇ? ಎಂದು ಹೇಳಿ ಅವರನ್ನು ಹುದ್ದೆಯಿಂದ ಅಮಾನತು ಮಾಡಿ ಕೂಲಂಕುಷ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಬಳಿಕ ಸಂವಿಧಾನ ಶಿಲ್ಪಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ನ್ಯಾಯಾಧೀಶರ ವಿರುದ್ಧ ಘೋಷಣೆ ಕೂಗಲಾಯಿತು, ಹಾಗೂ ಕೂಡಲೇ ಅವರ ಅವರ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸಿ ವೃತ್ತಿಯಿಂದ ವಜಾಗೊಳಿಸುವ ಬಗ್ಗೆ ಮುಲ್ಕಿ ತಹಶೀಲ್ದಾರ್ ಕಮಲಮ್ಮ ರವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಮುಲ್ಕಿ ತಾಲೂಕು ಅಂಬೇಡ್ಕರ್ ಯುವ ಸೇನೆ ಶಾಖೆ ಅಧ್ಯಕ್ಷ ಶ್ರೀಪತಿ ಕೆರೆಕಾಡು ಕಾರ್ಯದರ್ಶಿ ನವೀನ್ ಬೊಲ್ಲಾರ್, ದಸಂಸ ನಾಯಕರಾದ ಎಸ್ ಪಿ ಅನಿಲ್, ವಿಶುಕುಮಾರ್, ಮಂಜುನಾಥ ಆರ್ ಕೆ, ಸುರೇಶ್ ಕೆರೆಕಾಡು ಸೂರ್ಯಪ್ರಕಾಶ್ ಮುಲ್ಕಿ, ಎಸ್ಡಿಪಿಐ ನಾಯಕ ಆಸಿಫ್ ಕೋಟೆಬಾಗಿಲು, ಭೀಮಾಶಂಕರ್, ದಲಿತ ಸಂಘರ್ಷ ಸಮಿತಿಯ ನಾಯಕರು ಉಪಸ್ಥಿತರಿದ್ದರು
Kshetra Samachara
03/02/2022 01:45 pm