ಪುತ್ತೂರು: 3 ದಶಕಗಳಿಂದ ಕಲುಷಿತ ನೀರನ್ನೇ ಕುಡಿಯುತ್ತಿರುವ ದ.ಕ. ಜಿಲ್ಲೆಯ ಕೊಳ್ತಿಗೆ ಗ್ರಾಪಂ ವ್ಯಾಪ್ತಿಯ ಸಿದ್ಧಮೂಲೆ ಕಾಲೊನಿ ಕುಟುಂಬಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಆಗ್ರಹಿಸಿ ದಲಿತ ಸೇವಾ ಸಮಿತಿ ನೇತೃತ್ವದಲ್ಲಿ ಇಂದು ಪಂಚಾಯತ್ ಎದುರು ಪ್ರತಿಭಟನೆ ನಡೆಯಿತು.
ಈ ಸಂದರ್ಭ ದಲಿತ ಸೇವಾ ಸಮಿತಿ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು ಮಾತನಾಡಿ, ಸಿದ್ಧಮೂಲೆಯಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವ ದಲಿತ ಕುಟುಂಬಗಳು ಕಲುಷಿತ ನೀರನ್ನೇ ಕುಡಿಯುತ್ತಿದೆ. ರಸ್ತೆ ಪಕ್ಕದ ಕೆರೆ ನೀರನ್ನು ತನ್ನ ಎಲ್ಲಾ ಕಾರ್ಯಗಳಿಗೂ ಬಳಸುವ ಅನಿವಾರ್ಯತೆಯಲ್ಲಿದ್ದಾರೆ. ಈ ದುಸ್ಥಿತಿಯನ್ನು ಗ್ರಾಪಂ ಅಧಿಕಾರಿಗಳು ಹಾಗೂ ಅಧ್ಯಕ್ಷರ ಗಮನಕ್ಕೆ ತಂದರೂ ಪ್ರಯೋಜನ ಶೂನ್ಯ ಎಂದರು.
ಸ್ಥಳದಲ್ಲಿ ಪ್ರತಿಭಟನಾಕಾರರನ್ನು ಭೇಟಿಯಾದ ಗ್ರಾಪಂ ಅಧ್ಯಕ್ಷ ಶ್ಯಾಮ ಸುಂದರ್ ರೈ ಹಾಗೂ ಪಿಡಿಒ ಸುನಿಲ್, ಒಂದು ತಿಂಗಳ ಒಳಗೆ ಶುದ್ಧನೀರಿನ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿ, ಸದ್ಯಕ್ಕೆ ಈ ಕುಟುಂಬಗಳು ಬಳಸುತ್ತಿರುವ ಕೆರೆಗೆ ತಡೆಬೇಲಿ ಹಾಕಿ ಇತರರು ನೀರನ್ನು ಕಲುಷಿತಗೊಳಿಸದಂತೆ ಕ್ರಮ ಕೈಗೊಳ್ಳುವುದಾಗಿ ನೀಡಿದ ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನಾನಿರತರು ತಮ್ಮ ಪ್ರತಿಭಟನೆ ಹಿಂಪಡೆದರು.
Kshetra Samachara
31/01/2022 04:32 pm