ಉಡುಪಿ: ವಿದ್ಯಾರ್ಥಿನಿಯರ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ಇವತ್ತು ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಸರಕಾರಿ ಬಾಲಕಿಯರ ಕಾಲೇಜಿನಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಪ್ರಾಂಶುಪಾಲರು ಪೋಷಕರು ಮತ್ತು ಮುಸ್ಲಿಂ ಮುಖಂಡರು ಉಪಸ್ಥಿತರಿದ್ದರು.
ಕೆಲಕಾಲ ಚರ್ಚೆ ನಡೆದು ಹಿಜಾಬ್ ಧರಿಸಲು ಬಯಸುವ ವಿದ್ಯಾರ್ಥಿನಿಯರ ಪೋಷಕರಿಗೆ ಬಹುತೇಕ ಮನವರಿಕೆ ಮಾಡಲಾಗಿದೆ. ಆದರೆ ಒಂದಿಬ್ಬರು ನಾಳೆ ತಮ್ಮ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ. ಉಳಿದಂತೆ ತರಗತಿಯಲ್ಹಿ ಹಿಜಾಬ್ ಧರಿಸದೆ ಬರಲು ಒಪ್ಪಿಗೆ ಸೂಚಿಸಿದ್ದಾರೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಹಿಜಾಬ್ ಧರಿಸಿಯೇ ತರಗತಿಗೆ ಹಾಜರಾಗುತ್ತೇವೆ ಎಂದು ಹೇಳುವವರು ನಾಳೆಯಿಂದ ಕಾಲೇಜಿಗೆ ಬರುವುದು ಬೇಡ. ಹಿಜಾಬ್ ತೆಗೆದು ತರಗತಿಯಲ್ಲಿ ಕೂರುವವರು ಕ್ಲಾಸಿಗೆ ಬರಬಹುದು. ಇನ್ನು ಪರೀಕ್ಷೆ ಹತ್ತಿರ ಬರುತ್ತಿದ್ದು ಉಳಿದ ವಿದ್ಯಾರ್ಥಿಗಳಿಗೂ ತೊಂದರೆ ಆಗಬಾರದು. ಹಾಗಾಗಿ ನಾಳೆಯಿಂದ ಎಲ್ಲರಂತೆ ಸಮವಸ್ತ್ರದಲ್ಲಿ ಪಾಠ ಕೇಳಲು ಇಷ್ಟವಿಲ್ಲದಿದ್ದರೆ ಕಾಲೇಜಿನತ್ತ ಬರುವುದು ಬೇಡ. ಜೊತೆಗೆ ರಾಜಕೀಯ ನಾಯಕರು, ಸಂಘಟನೆಯವರು ಕೂಡ ಕಾಲೇಜಿನ ಕಾಂಪೌಂಡ್ ಒಳಗಡೆ ಬರಕೂಡದು ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.
PublicNext
31/01/2022 04:04 pm