ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಭಿವೃದ್ಧಿ ಕೆಲಸವನ್ನೇ ಮಾಡದ ಗ್ರಾ.ಪಂ.-ಪಂಚಾಯತ್ ಸಭೆ ಬಹಿಷ್ಕರಿಸಿದ ಗ್ರಾಮಸ್ಥರು

ಸುಳ್ಯ: ತಾಲೂಕಿನ ಜಾಲ್ಸೂರು ಗ್ರಾಮ ಪಂಚಾಯತ್ ಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಪ್ರತಿ ಗ್ರಾಮ ಸಭೆಯಲ್ಲಿ ಚರ್ಚೆ ಮಾಡುತ್ತಿದ್ದು, ಕೇವಲ ಭರವಸೆಯೇ ಹೊರತು ಇದುವರೆಗೆ ಯಾವುದೇ ಸಮಸ್ಯೆಗಳು ಇತ್ಯರ್ಥ ಗೊಳ್ಳಲಿಲ್ಲ ಎಂದು ಆರೋಪಿಸಿ ಜ.19ರಂದು ನಡೆದ ನಮ್ಮ ಗ್ರಾಮ ನಮ್ಮ ಯೋಜನೆಗೆ (ದೂರ ದೃಷ್ಟಿ ಯೋಜನೆಯಡಿ) ವಿಶೇಷ ಗ್ರಾಮ ಸಭೆಯನ್ನು ಗ್ರಾಮಸ್ಥರು ಬಹಿಷ್ಕರಿಸಿದ್ದಾರೆ.

ಗ್ರಾಮಸಭೆಗೆ ಅಧ್ಯಕ್ಷ ಕೆ.ಎಂ. ಬಾಬು ಕದಿಕಡ್ಕ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಸುಬ್ಬಯ್ಯ, ನೋಡೆಲ್ ಅಧಿಕಾರಿಗಳು ಹಾಗೂ ಪಂಚಾಯತಿ ಸದಸ್ಯರುಗಳು ಸೇರಿ ಸಭಾಭವನಕ್ಕೆ ತೆರಳುವ ಸಂದರ್ಭದಲ್ಲಿ ಅಲ್ಲಿ ಸೇರಿದ ಗ್ರಾಮಸ್ಥರು ಮರಸಂಕ ಅಂಗನವಾಡಿ ಶಿಕ್ಷಕಿಯನ್ನು ಬದಲಾವಣೆ ಮಾಡದ ಕುರಿತು, ಹಾಗೂ ಕಳೆದ ಸಭೆಗಳಲ್ಲಿ ತೆಗೆದುಕೊಂಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತಾರದ ವಿಷಯದಲ್ಲಿ ಗ್ರಾಮಸ್ಥರು ಆಕ್ರೋಶಗೊಂಡರು.

ಇವತ್ತಿನ ಗ್ರಾಮಸಭೆಗೆ ಮುಖ್ಯವಾಗಿ ಸಿ.ಡಿ.ಪಿ.ಒ. ಬರಲೇಬೇಕು. ಅವರನ್ನು ಕರೆಸಿ ಎಂದು ಪಟ್ಟು ಹಿಡಿದರು.

ಆಗ ಪಿ.ಡಿ.ಒ. ಸುಬ್ಬಯ್ಯ ಅವರು ಮಾತನಾಡಿ ಮರಸಂಕ ಅಂಗನವಾಡಿ ಶಿಕ್ಷಕಿ ಬದಲಾವಣೆ ಕುರಿತಂತೆ ಕಳೆದ ಗ್ರಾಮ ಸಭೆಯಲ್ಲಿ ನಿರ್ಣಯ ಮಾಡಿ ಸುಳ್ಯ ಸಿ.ಡಿ.ಪಿ.ಒ. ಕಚೇರಿಗೆ ಮಾಹಿತಿ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು.

ನಂತರ ಆಗ್ರಹಿಸಿದ ಗ್ರಾಮಸ್ಥರು ಸಭೆಗೆ ಬರಬೇಕಾದ ಇಲಾಖೆಯ ಅಧಿಕಾರಿಗಳು ಬರುವುದಿಲ್ಲ‌. ಬದಲಾಗಿ ಅವರ ಕಚೇರಿ ಸಿಬ್ಬಂದಿಗಳನ್ನು ಕಳುಹಿಸುತ್ತಾರೆ‌. ನಾವು ಗ್ರಾಮ ಮಟ್ಟದಿಂದ ಕೇಳುವ ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಇರುವುದಿಲ್ಲ ಎಂದು ಹತಾಶೆ ವ್ಯಕ್ತಪಡಿಸಿದರು. ಈ ಎಲ್ಲಾ ಘಟನೆಗಳಿಂದ ಗ್ರಾಮ ಪಂಚಾಯತ್ ಸಭಾಂಗಣದ ಹೊರಭಾಗದಲ್ಲಿ ಕೆಲವು ಗಂಟೆಗಳ ಕಾಲ ಗ್ರಾಮಸ್ಥರ ಮತ್ತು ಅಧಿಕಾರಿಗಳ ವಾಗ್ವಾದಗಳು ನಡೆದವು.

ಆ ಬಳಿಕ ಅಧ್ಯಕ್ಷ ಕೆ.ಎಂ‌. ಬಾಬು ಕದಿಕಡ್ಕ, ಪಿ.ಡಿ.ಒ. ಸುಬ್ಬಯ್ಯ, ಗ್ರಾ.ಪಂ. ಸದಸ್ಯರುಗಳು ಗ್ರಾಮಸ್ಥರನ್ನು ಸಮಾಧಾನಪಡಿಸಿ ಗ್ರಾಮಸಭೆಗಾಗಿ ಸಭಾಭವನಕ್ಕೆ ತೆರಳಿದರೆ ಗ್ರಾಮದ ಮುಖಂಡರುಗಳಾದ ಸತ್ಯಶಾಂತಿ, ಕೃಷ್ಣಪ್ಪ ನಾಯ್ಕ, ವಿನೋದ್ ಕುಮಾರ್, ಸತೀಶ್ ಸೇರಿದಂತೆ ಇಪ್ಪತ್ತಕ್ಕೂ ಅಧಿಕ ಮಂದಿ ಗ್ರಾಮಸ್ಥರು ಸಭೆಗೆ ಭಾಗವಹಿಸಿದೆ ಅಲ್ಲಿಂದ ತೆರಳಿದ ಘಟನೆ ನಡೆದಿದೆ.

Edited By :
Kshetra Samachara

Kshetra Samachara

19/01/2022 04:48 pm

Cinque Terre

19.27 K

Cinque Terre

1

ಸಂಬಂಧಿತ ಸುದ್ದಿ