ಮಂಗಳೂರು: ಕಳೆದ ಆರು ತಿಂಗಳಿನಿಂದ ವೇತನ ದೊರೆಯದಿರುವ ಕಾರಣ ಜೀವನ ನಿರ್ವಹಣೆ ದುಸ್ತರವಾಗುತ್ತಿದೆ ಎಂದು ನಗರ ಹೊರವಲಯದ ನಾಟೇಕಲ್ ಪ್ರಾ. ಆ. ಕೇಂದ್ರದ ಕಿರಿಯ ಪ್ರಯೋಗಾಲಯ ತಾಂತ್ರಿಕ ಅಧಿಕಾರಿ ಜಲೀಲ್ ಇಬ್ರಾಹಿಂ ದ.ಕ. ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಇಂದು ಧರಣಿ ಸತ್ಯಾಗ್ರಹ ನಡೆಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಲೀಲ್ , 7 ವರ್ಷ ಗುತ್ತಿಗೆ ಆಧಾರದಲ್ಲಿ 15 ವರ್ಷಗಳಿಂದ ಖಾಯಂ ಆಗಿ ನಾಟೇಕಲ್ ಪ್ರಾ. ಆ. ಕೇಂದ್ರದಲ್ಲಿ ಕಿರಿಯ ಪ್ರಯೋಗಾಲಯ ತಾಂತ್ರಿಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಆದರೆ, ಹೊಸದಾಗಿ ನೇಮಕಗೊಂಡ ವೈದ್ಯಾಧಿಕಾರಿ ಕಳೆದ 6 ತಿಂಗಳ ತನ್ನ ವೇತನವನ್ನು ಅನುದಾನವಿದ್ದರೂ ಸಣ್ಣಪುಟ್ಟ ಕಾರಣ ತಿಳಿಸಿ ತಡೆ ಹಿಡಿದಿದ್ದಾರೆ. ಈ ಬಗ್ಗೆ ನಾನು ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕರಿಗೆ ಸಾಕಷ್ಟು ಬಾರಿ ಮನವಿ ಮಾಡಿದ್ದೇನೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ವೈದ್ಯಾಧಿಕಾರಿಗಳು ವೇತನ ನೀಡಲು ಆದೇಶಿಸಿದ್ದರೂ ವೈದ್ಯಾಧಿಕಾರಿ ವೇತನ ನೀಡದೆ ನನಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ನನ್ನ ಕುಟುಂಬ ನಿರ್ವಹಣೆಗೆ ತುಂಬಾ ಕಷ್ಟವಾಗಿದೆ. ನನ್ನ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯುಂಟಾಗಿದೆ. ನನ್ನ ಆರೋಗ್ಯವೂ ಹದಗೆಡುತ್ತಿದೆ. ನನ್ನ ಆರೋಗ್ಯಕ್ಕೆ ಕುಂದುಂಟಾದರೆ ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾಡಳಿತ ನೇರ ಹೊಣೆ ಎಂದರು.
Kshetra Samachara
07/01/2022 09:27 am