ಮುಲ್ಕಿ: ಮುಲ್ಕಿ ನಗರ ಪಂಚಾಯತ್ ಮಾಸಿಕ ಸಭೆ ನ. ಪಂ. ಅಧ್ಯಕ್ಷ ಸುಭಾಷ್ ಶೆಟ್ಟಿ ನೇತೃತ್ವದಲ್ಲಿ ಭಾರಿ ಸದ್ದು ಗದ್ದಲದೊಂದಿಗೆ ಆಡಳಿತ ಪಕ್ಷ ವಿಪಕ್ಷಗಳ ಆರೋಪ ಪ್ರತ್ಯಾರೋಪಗಳ ನಡುವೆ ನಡೆಯಿತು.
ಸಭೆಯ ಆರಂಭದಲ್ಲಿ ನಗರ ಪಂಚಾಯತ್ ಮುಖ್ಯಾಧಿಕಾರಿ ಚಂದ್ರಪೂಜಾರಿ ಹಿಂದಿನ ಸಭೆಯ ನಡಾವಳಿಗಳನ್ನು ಓದುತ್ತಿರುವಾಗ ನ.ಪಂ ವ್ಯಾಪ್ತಿಯಲ್ಲಿ ದಾರಿದೀಪದ ಅವ್ಯವಸ್ಥೆ ಬಗ್ಗೆ ಚರ್ಚೆ ನಡೆದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿ ಸರಿಪಡಿಸಲು ಆಗ್ರಹಿಸಿದರು.
ಬಳಿಕ ಮುಖ್ಯಾಧಿಕಾರಿಗಳು ಮನೆ ರಿಪೇರಿ, ಅಂಗವಿಕಲ ವೇತನ ಸಹಿತ ಮತ್ತಿತರ ಫಲಾನುಭವಿಗಳ ಬಗ್ಗೆ ತಿಳಿಸುವಾಗ ನ. ಪಂ ವಿರೋಧಪಕ್ಷದ ನಾಯಕಿ ವಿಮಲಾ ಪೂಜಾರಿ ಆಕ್ಷೇಪ ವ್ಯಕ್ತಪಡಿಸಿ ಆಯ್ಕೆ ಪಾರದರ್ಶಕವಾಗಿಲ್ಲ ನಿಜವಾದ ಫಲಾನುಭವಿಗಳಿಗೆ ಸರಕಾರದ ಸವಲತ್ತುಗಳು ದೊರೆಯುವುದು ಕನಸಿನ ಕೂಸಾಗಿದೆ ಎಂದು ಹೇಳಿ ಫಲಾನುಭವಿಗಳ ಪಟ್ಟಿಯನ್ನು ಮರುಪರಿಶೀಲಿಸಲು ಒತ್ತಾಯಿಸಿ ಸಭೆಯನ್ನು ಬಹಿಷ್ಕರಿಸಿ ಅಧ್ಯಕ್ಷರ ಮೇಜಿನ ಬಳಿ ಧಾವಿಸಿ ಪ್ರತಿಭಟನೆ ನಡೆಸಿ ಅಧ್ಯಕ್ಷರು ಉಪಾಧ್ಯಕ್ಷರು ಎಲ್ಲರೂ ಸುಳ್ಳುಗಾರರು, ನಮ್ಮ ಪ್ರಧಾನಿಯ ಹಾಗೆ ಸುಳ್ಳು ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಮಾತಿಗೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪವೆತ್ತಿದಾಗ ಮಾತಿನ ಚಕಮಕಿ ನಡೆಯಿತು.
ಈ ನಡುವೆ ವಿಪಕ್ಷ ಸದಸ್ಯರಾದ ಪುತ್ತುಬಾವ,ಮಂಜುನಾಥ ಕಂಬಾರ, ಬಾಲಚಂದ್ರ ಕಾಮತ್ ಮುನ್ನಾ ಯಾನೆ ಮಹೇಶ್, ಸಂದೀಪ್ ಕುಮಾರ್ ಧ್ವನಿ ಗೂಡಿಸಿ ಅಧ್ಯಕ್ಷರ ಮೇಜಿನ ಕಡೆ ಧಾವಿಸಿ ಫಲಾನುಭವಿಗಳ ಪಟ್ಟಿಯನ್ನು ಮರುಪರಿಶೀಲಿಸಲು ಪಟ್ಟು ಹಿಡಿದಾಗ ಮಧ್ಯಪ್ರವೇಶಿಸಿದ ಮುಖ್ಯಾಧಿಕಾರಿ ಚಂದ್ರಪೂಜಾರಿ ಫಲಾನುಭವಿಗಳ ಆಯ್ಕೆಯಲ್ಲಿ ಯಾವುದೇ ಒತ್ತಡ ಅಮಿಷಗಳಿಗೆ ಒಳಗಾಗಿಲ್ಲ ಎಲ್ಲವೂ ಪಾರದರ್ಶಕವಾಗಿದೆ ಎಂದು ಸ್ಪಷ್ಟನೆ ನೀಡಿದರು.
Kshetra Samachara
30/12/2021 04:36 pm