ಮಂಗಳೂರು: ಉಪ್ಪಿನಂಗಡಿ ಪ್ರಕರಣದಲ್ಲಿ ಪ್ರತಿಭಟನಾಕಾರರು ಜೈಲಿಗೆ, ಪೊಲೀಸ್ ವಾಹನಕ್ಕೆ ಕಲ್ಲು ಬಿಸಾಡಿದ್ದು, ಮಹಿಳಾ ಪೊಲೀಸ್ ಮಾನಭಂಗಕ್ಕೆ ಯತ್ನಿಸಿದ್ದು, ಪೊಲೀಸ್ ಮೇಲೆ ಹಲ್ಲೆ ನಡೆಸಿದ್ದು ಹೌದಾದಲ್ಲಿ ದ.ಕ.ಜಿಲ್ಲಾ ಎಸ್ಪಿ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಲಿ ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಚಾಲೆಂಜ್ ಮಾಡಿದರು.
ನಗರದಲ್ಲಿಂದು ಮಾತನಾಡಿದ ಅವರು, ತಕ್ಷಣ ಈ ಬಗ್ಗೆ ಎಸ್ಪಿಯವರು ಸುದ್ದಿಗೋಷ್ಠಿ ಕರೆದು ಸಾರ್ವಜನಿಕವಾಗಿ ಇದರ ವೀಡಿಯೋ ಬಿಡುಗಡೆ ಮಾಡಲಿ. ಪೊಲೀಸರು ಸಂವಿಧಾನ ವಿರೋಧವಾಗಿ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಿದ್ದಾರೆ. ಆದರೆ ಇದೀಗ ಅವರು ತಮ್ಮ ತಲೆ ಉಳಿಸಿಕೊಳ್ಳಲು ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ. ತಕ್ಷಣ ಗೃಹ ಮಂತ್ರಿಯವರು ಈ ಪ್ರಕರಣವನ್ನು ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡಸಲಿ ಎಂದು ಆಗ್ರಹಿಸಿದರು.
ನಮ್ಮದು ಜೈಲಿಗೆ ಹೋಗಲು, ಪೊಲೀಸ್ ಲಾಠಿಗೆ ಭಯಬೀಳುವ ಸಂಘಟನೆಯಲ್ಲ. ನಮ್ಮಲ್ಲಿ ತಪ್ಪಿತಸ್ಥರಿದ್ದಲ್ಲಿ ನಾವು ಜೈಲಿಗೆ ಹೋಗಲೂ ಸಿದ್ಧ. ಸತ್ಯ, ನ್ಯಾಯಕ್ಕಾಗಿ ಕೊರಳು ಒಡ್ಡಲೂ ನಮ್ಮ ಕಾರ್ಯಕರ್ತರು ಸಿದ್ಧರಿದ್ದಾರೆ. ಈ ಪ್ರಕರಣವನ್ನು ನಾವು ಸಂವಿಧಾನಾತ್ಮಕ ಹಾಗೂ ಕಾನೂನು ಮುಖೇನ ಎದುರಿಸುತ್ತೇವೆ. ಅಲ್ಲದೆ ಪೊಲೀಸ್ ಷಡ್ಯಂತರಕ್ಕೆ ಬಲಿಯಾಗಿ ಮೊಕದ್ದಮೆ ದಾಖಲಿಸಿಕೊಂಡ ಸಂತ್ರಸ್ತರಿಗೆ ಎಸ್ ಡಿಪಿಐ ನೈತಿಕ, ಕಾನೂನು ಬೆಂಬಲ ನೀಡುತ್ತದೆ. ಅವರ ಜೊತೆಯಾಗಿ ನಿಂತು ಹೋರಾಟ ಮಾಡಲಿದ್ದೇವೆ ಎಂದು ಅಬ್ದುಲ್ ಮಜೀದ್ ಮೈಸೂರು ಹೇಳಿದರು.
Kshetra Samachara
17/12/2021 03:10 pm