ಮಂಗಳೂರು: ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಲು ಹೊರಟಿರುವುದನ್ನು ದ.ಕ. ಬಹುಜನ ಸಮಾಜ ಪಾರ್ಟಿ(ಬಿಎಸ್ ಪಿ) ಖಂಡಿಸಿದೆ. ಈಗಾಗಲೇ ರಾಜ್ಯದಲ್ಲಿ ಜಾರಿಯಲ್ಲಿರುವ ಕಾನೂನಿನ ಅನ್ವಯವೇ ಆಮಿಷ ಮತ್ತು ಬಲವಂತದ ಮತಾಂತರ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶವಿದೆ.
ಆದರೂ ಹೊಸ ಕಾಯ್ದೆ ಜಾರಿ ಯತ್ನ ಜನರನ್ನು ದಿಕ್ಕು ತಪ್ಪಿಸುವ ತಂತ್ರ ಎಂದು ಬಹುಜನ ಸಮಾಜ ಪಾರ್ಟಿ ಸಂಯೋಜಕ ಗೋಪಾಲ್ ಮುತ್ತೂರು ಹೇಳಿದ್ದಾರೆ. ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಪತನಗೊಳಿಸಿ, ಇತರ ಪಕ್ಷಗಳ ಶಾಸಕರನ್ನು ಖರೀದಿ ಮಾಡಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರ, ಜನರ ನಿರೀಕ್ಷೆ ಈಡೇರಿಸುವಲ್ಲಿ ವಿಫಲವಾಗಿದೆ ಎಂದರು.
ಕೊರೊನಾ ನಿಯಂತ್ರಣ ವೈಫಲ್ಯ, ಹಾಸಿಗೆ, ವೆಂಟಿಲೇಟರ್, ಔಷಧಿ ಖರೀದಿ ಹಗರಣ, ಪ್ರವಾಹ ಪೀಡಿತರಿಗೆ ನೆರವು ಒದಗಿಸಲು ವಿಫಲ, ಗುತ್ತಿಗೆಯಲ್ಲಿ ಶೇ. 40 ಕಮಿಷನ್, ಬಿಟ್ ಕಾಯಿನ್ ಹಗರಣ, ಕ್ರಿಶ್ಚಿಯನ್ನರ ಮೇಲೆ ದಾಳಿ ಹೀಗೆ ಎಲ್ಲವೂ ಜನಾಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿಯೇ ಈ ವೈಫಲ್ಯಗಳು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಆದ್ದರಿಂದ ಬಿಬಿಎಂಪಿ, ಜಿಲ್ಲಾ- ತಾಪಂ ಚುನಾವಣೆ ಮುಂದೂಡುತ್ತಾ ಬರಲಾಗುತ್ತಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಳ್ಳುವ ಭಯದಿಂದ ಜನರನ್ನು ದಿಕ್ಕು ತಪ್ಪಿಸಲು ಮತಾಂತರ, ಲವ್ ಜಿಹಾದ್‌ನಂತಹ ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತರುತ್ತಿದೆ ಎಂದು ಆರೋಪಿಸಿದರು.
Kshetra Samachara
16/12/2021 08:29 pm