ಬಂಟ್ವಾಳ: ದಕ್ಷಿಣ ಕನ್ನಡ, ಉಡುಪಿ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳ ವಿಧಾನ ಪರಿಷತ್‌ನ 2 ಸ್ಥಾನಗಳಿಗೆ ಡಿ. 10ರಂದು ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಮೊಡಂಕಾಪು ಇನ್ಫೆಂಟ್ ಜೀಸಸ್ ಶಾಲೆಯಲ್ಲಿ ಮಸ್ಟರಿಂಗ್ ಕಾರ್ಯ ಗುರುವಾರ ನಡೆಯಿತು.
ಒಟ್ಟು 7 ಕೊಠಡಿಗಳಲ್ಲಿ ಈ ಕಾರ್ಯ ನಡೆಯಿತು. ಬಳಿಕ 18 ರೂಟ್‌ಗಳಲ್ಲಿ 18 ವಾಹನಗಳ ಮೂಲಕ ಮತಪೆಟ್ಟಿಗೆಯನ್ನು ಸಾಗಿಸಲಾಯಿತು. ಮತದಾನ ಪೂರ್ಣಗೊಂಡ ಬಳಿಕ ಪೆಟ್ಟಿಗೆಗಳನ್ನು ಮತ್ತೆ ಮೊಡಂಕಾಪು ತಂದು ಬಳಿಕ ಮಂಗಳೂರಿನ ಸ್ಟ್ರಾಂಗ್ ರೂಮ್‌ಗೆ ಸಾಗಿಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿ ಸಿದ್ಧತೆ ಪರಿಶೀಲನೆ ನಡೆಸಿದರು. ಈ ಸಂದರ್ಭ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್., ತಾ.ಪಂ ಇಒ ರಾಜಣ್ಣ, ಚುನಾವಣಾ ಶಾಖಾ ಉಪ ತಹಶೀಲ್ದಾರ್ ನವೀನ್ ಬೆಂಜನಪದವು, ಉಪ ತಹಶೀಲ್ದಾರ್‌ಗಳಾದ ರಾಜೇಶ್ ನಾಯ್ಕ್, ದಿವಾಕರ ಮುಗುಳಿಯ, ಕಂದಾಯ ನಿರೀಕ್ಷಕರಾದ ಧರ್ಮ ಸಾಮ್ರಾಜ್ಯ, ಮಂಜುನಾಥ್ ಕೆ.ಎಚ್, ಕುಮಾರ್ ಟಿ.ಸಿ ಬಂಟ್ವಾಳ ತಾಲೂಕಿನ ಪೊಲೀಸ್ ಇನ್ಸ್ ಪೆಕ್ಟರ್ ಗಳಾದ ವಿವೇಕಾನಂದ, ನಾಗರಾಜ್, ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.
ಬಂಟ್ವಾಳ ತಾಲೂಕಿನ 58 ಗ್ರಾ.ಪಂ.ಗಳು ಹಾಗೂ ಬಂಟ್ವಾಳ ಪುರಸಭೆ ಸೇರಿ ಒಟ್ಟು 59 ಬೂತ್ಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. 437 ಪುರುಷರು ಹಾಗೂ 466 ಮಹಿಳೆಯರು ಸೇರಿ ಒಟ್ಟು 903 ಮಂದಿ ಮತದಾರರಿದ್ದಾರೆ. ಈ ಚುನಾವಣೆಯಲ್ಲಿ ಶಾಸಕರು ಕೂಡ ಮತದಾನ ಮಾಡಲಿದ್ದಾರೆ. ಪ್ರತಿ ಬೂತ್ಗಳಲ್ಲಿ ಓರ್ವ ಪಿಆರ್ಒ, ಎಪಿಆರ್ ಒ., ಮೈಕ್ರೋ ಅಬ್ಸಾರ್ವರ್, ಡಿ ಗ್ರೂಪ್, ಪೊಲೀಸ್ ಸಿಬಂದಿ, ಕ್ಯಾಮರಾ ಮ್ಯಾನ್ ಇರುತ್ತಾರೆ. ಬಂಟ್ವಾಳ ಪುರಸಭೆಯಲ್ಲಿ 27 ಸದಸ್ಯರು, 5 ಮಂದಿ ನಾಮ ನಿರ್ದೇಶಿತ ಸದಸ್ಯರು, ಶಾಸಕರು ಸೇರಿ ಒಟ್ಟು 33 ಮಂದಿ ಮತಚಲಾಯಿಸಲಿದ್ದು, 7 ಸದಸ್ಯರಿರುವ ಗ್ರಾ.ಪಂ.ಗಳು ಕಡಿಮೆ ಸಂಖ್ಯೆಯ ಮತದಾನ ಕೇಂದ್ರಗಳಾಗಿವೆ.
Kshetra Samachara
09/12/2021 05:04 pm