ಬಂಟ್ವಾಳ: ಅಕ್ರಮ ಗಣಿಗಾರಿಕೆ ನಿಲ್ಲಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ, ಜಿಲ್ಲಾಧಿಕಾರಿಯ ಕೊರಳ ಪಟ್ಟಿ ಹಿಡಿಯುತ್ತೇವೆ ಎಂದು ಜಿಲ್ಲಾಧಿಕಾರಿಗೆ ಎಚ್ಚರಿಕೆ ನೀಡಿದ್ದಾರೆ.ಹಿಂದೂ ಜಾಗರಣ ವೇದಿಕೆಯ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಾರಿಂಜ ದೇವಸ್ಥಾನದ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ಹಾಗೂ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತರುವುದರ ವಿರುದ್ಧ ಜನಜಾಗೃತಿ ಮೂಡಿಸಲು ಕಾರಿಂಜ ರಥಬೀದಿಯಲ್ಲಿ ಭಾನುವಾರ ಸಂಜೆ ಹಮ್ಮಿಕೊಂಡ 'ರುದ್ರಗಿರಿಯ ರಣ ಕಹಳೆ' ಜನಜಾಗೃತಿ ಸಭೆಯಲ್ಲಿ ಮಾತನಾಡಿದರು.
ಅಕ್ರಮ ಗಣಿಗಾರಿಕೆ ನಿಲ್ಲಿಸಲು ಜಿಲ್ಲಾಧಿಕಾರಿಗೆ 30 ದಿನಗಳ ಕಾಲಾವಕಾಶ ನೀಡುತ್ತಿದ್ದೇವೆ. ತಪ್ಪಿದ್ದಲ್ಲಿ ಡಿ. 21ರಂದು ಸಾವಿರಾರು ಜನರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ, ಜಿಲ್ಲಾಧಿಕಾರಿಯ ಕೊರಳಪಟ್ಟಿಯನ್ನೇ ಹಿಡಿಯುತ್ತೇವೆ. ತಾಕತ್ತಿದ್ದರೆ ಗಣಿಗಾರಿಕೆ ನಿಲ್ಲಿಸು. ಇಲ್ಲದಿದ್ದರೆ ವರ್ಗಾವಣೆ ತೆಗೆದುಕೊಂಡು, ಹೊರಗೆ ಹೋಗು ಎಂದು ಜಗದೀಶ್ ಕಾರಂತ ಏಕವಚನದಲ್ಲೇ ಜಿಲ್ಲಾಧಿಕಾರಿಗೆ ಜಾಡಿಸಿದ್ದಾರೆ.
ಅಕ್ರಮ ಗಣಿಗಾರಿಕೆಯನ್ನು 24 ಗಂಟೆಯೊಳಗೆ ನಿಲ್ಲಿಸುವ ಅಧಿಕಾರ ಜಿಲ್ಲಾ ಉಸ್ತುವಾರಿ ಮಂತ್ರಿ ಮತ್ತು ಜಿಲ್ಲಾಧಿಕಾರಿಗೆ ಇದೆ. ಗಣಿಗಾರಿಕೆ ನಿಲ್ಲಿಸಲು ಅಸಾಧ್ಯವಾದರೆ ರಾಜೀನಾಮೆ ನೀಡಿ ಮನೆಗೆ ಹೋಗು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರಿಗೂ ತಾಕೀತು ಮಾಡಿದ ಜಗದೀಶ್ ಕಾರಂತ, ಅಕ್ರಮ ಗಣಿಗಾರಿಕೆ ಮಾಡಿ ಒಂದೇ ಒಂದು ವಾಹನ ರಸ್ತೆಗೆ ಇಳಿಯಲು ನಾವು ಬಿಡುವುದಿಲ್ಲ. ಆಕಸ್ಮಾತ್ ವಾಹನ ರಸ್ತೆಗೆ ಇಳಿದರೆ ಅದರ ಡ್ರೈವರ್ ಜೀವಂತವಾಗಿ ಹೋಗುವುದಿಲ್ಲ ಎಂದು ಗುಡುಗಿದರು.
Kshetra Samachara
22/11/2021 09:59 am