ಮಂಗಳೂರು: ರಾಜ್ಯದ ಎಲ್ಲ ಪಿಡಬ್ಲ್ಯೂಡಿ ಗುತ್ತಿಗೆದಾರರು ಪ್ರಧಾನಿ ಮೋದಿಯವರಿಗೆ ಪತ್ರ ಬರೆದು, ಗುತ್ತಿಗೆ ಕಾಮಗಾರಿ ನಿರ್ವಹಿಸಲು ಶೇ.40ರಷ್ಟು ಖರ್ಚು ಮಾಡಬೇಕಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಇದನ್ನು ರಾಜ್ಯಪಾಲರು ಗಂಭೀರವಾಗಿ ಪರಿಗಣಿಸಿ ಸ್ವಯಂಪ್ರೇರಿತವಾಗಿ ತನಿಖೆ ನಡೆಸಲು ನಿರ್ದೇಶಿಸಬೇಕು ಎಂದು ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿರುವ ಅವರು, ರಾಜ್ಯದ ಹಿಂದಿನ ಕಾಂಗ್ರೆಸ್ ಸರ್ಕಾರವನ್ನು ‘10 ಪರ್ಸೆಂಟ್ ಸರ್ಕಾರ’ ಎಂದು ನರೇಂದ್ರ ಮೋದಿ ಕರೆದಿದ್ದರು. ಆದರೆ, ಇದೀಗ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧವೇ ಗುತ್ತಿಗೆದಾರರು ಶೇ.40 ಕಮಿಷನ್ ಆರೋಪ ಮಾಡಿದ್ದಾರೆ. ಈ ಹಣ ಬಿಜೆಪಿ ಕಚೇರಿಗೆ ಹೋಗಿದೆಯೇ? ಪಕ್ಷದ ಅಧ್ಯಕ್ಷರಿಗೆ, ಸಿಎಂಗೆ ಕೊಟ್ಟಿದ್ದಾರೆಯೇ? ಕಮಿಷನ್ ಹಣ ಸಂಗ್ರಹಕ್ಕೆ ಏಜೆಂಟ್ ನೇಮಕ ಮಾಡಲಾಗಿದೆಯೇ? ಬಿಟ್ ಕಾಯಿನ್ ದಂಧೆಯಲ್ಲಿ ಈ ಹಣ ಹೂಡಿಕೆ ಆಗಿದೆಯಾ? ಎನ್ನುವುದು ಜನರಿಗೆ ಗೊತ್ತಾಗಲಿ ಎಂದರು.
ಶೇ.40 ಕಮಿಷನ್ ನೀಡುವುದಾದರೆ ಗುತ್ತಿಗೆದಾರರಿಗೆ ಟೆಂಡರ್ ಯಾಕೆ ಬೇಕು. ‘ನಾ ಖಾವೂಂಗ, ನಾ ಖಾನೇದೂಂಗ’ ಎಂದಿರುವ ನರೇಂದ್ರ ಮೋದಿಯವರ ಪಕ್ಷದ ಸರ್ಕಾರದ ಮೇಲೆ ಈಗ ಗಂಭೀರ ಆರೋಪ ಬಂದಿದೆ. ಅವರು ಗುತ್ತಿಗೆದಾರರಿಗೆ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
Kshetra Samachara
20/11/2021 09:34 pm