ಮಂಗಳೂರು: 'ಬಿರುವೆರ್ ಕುಡ್ಲ' ಎಂಬ ಸಮುದಾಯದ ಹೆಸರನ್ನಿರಿಸಿ ಸಂಘಟನೆ ಕಟ್ಟಿಕೊಂಡವರು ದೇಶದ್ರೋಹಿ ಕೃತ್ಯ ಎಸಗಿರುವವರೊಂದಿಗೆ ಕೈ ಜೋಡಿಸಿರುವುದು ಎಷ್ಟು ಸರಿ? ಎಂದು ವಿಎಚ್ ಪಿ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಮಾತಿನ ಚಾಟಿ ಬೀಸಿದ್ದಾರೆ.
ಇತ್ತೀಚೆಗೆ ಬಿರುವೆರ್ ಕುಡ್ಲ ಸಂಘಟನೆ ಹಾಗೂ ಅದರ ವಿರೋಧಿ ತಂಡದ ನಡುವೆ ಬಳ್ಳಾಲ್ ಬಾಗ್ ನಲ್ಲಿ ನಡೆದಿರುವ ಬೀದಿ ಕಾಳಗವನ್ನು ಖಂಡಿಸಿ ನಡೆಸಿದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಡವರಿಗೆ ನೆರವಿನಹಸ್ತ ನೀಡುವ, ನವರಾತ್ರಿ ಸಂದರ್ಭ ಹುಲಿವೇಷ ಹಾಕಿ ಮಂಗಳೂರು ದಸರಾವನ್ನು ವೈಭವೋಪೇತ ಗೊಳಿಸುವ ಬಿರುವೆರ್ ಕುಡ್ಲ ಇತ್ತೀಚೆಗೆ ನಡೆಸಿರುವ ಈ ಕೃತ್ಯ ಯಾರೂ ಒಪ್ಪುವಂತದ್ದಲ್ಲ. ಮುಂದೆಯೂ ಇದೇ ರೀತಿ ತಾವು ಮುಂದುರಿಸಿದ್ದಲ್ಲಿ ನಿಮ್ಮ ಸಂಘಟನೆಗೆ ಯಾರೂ ಕಾರ್ಯಕರ್ತರಿಲ್ಲದಂತಾಗುತ್ತದೆ ಎಂದರು.
ಬಿರುವೆರ್ ಕುಡ್ಲ ಎಂದು ಜಾತಿಯೊಂದರ ಹೆಸರನ್ನಿರಿಸಿಕೊಂಡು ಸಂಘಟನೆ ಕಟ್ಟಿದ್ದೀರಿ. ಆದರೆ, ನೀವು ಹಲ್ಲೆ ನಡೆಸಿರುವ ಯುವಕರಲ್ಲಿ ಅದೇ ಬಿರುವ ಸಮುದಾಯದ ಯುವಕರಿದ್ದರು. ನಮ್ಮ ಉದ್ದೇಶ ಹಿಂದೂಗಳನ್ನು, ಹಿಂದೂ ಸಮಾಜವನ್ನು ಒಟ್ಟು ಮಾಡುವುದು. ನಿಮ್ಮಲ್ಲೂ ಬೇರೆ ಬೇರೆ ಸಂಘಟನೆಗಳು ಇರಬಹುದು. ಆದರೆ, ಯಾವತ್ತೂ ಹಿಂದೂ ವಿರೋಧಿ ಚಟುವಟಿಕೆ ನಡೆಸದಿರಿ ಎಂದರು.
ಎನ್ಆರ್ ಸಿ ಗಲಭೆಯಲ್ಲಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದವರೂ ಮೊನ್ನೆಯ ಗಲಾಟೆಯಲ್ಲಿದ್ದರು. ಇಂತಹ ದೇಶ ವಿರೋಧಿ ಕೃತ್ಯ ನಡೆಸಿದವರು ಬಳ್ಳಾಲ್ ಬಾಗ್ ಪ್ರದೇಶಕ್ಕೆ ಬಂದು ಗಲಭೆ ನಡೆಸಿದ್ದಾರೆಂದರೆ ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.
Kshetra Samachara
14/11/2021 09:47 pm