ಮಂಗಳೂರು: ದೇಶದ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಎರಡು ಬಾರಿ ಇಬ್ಭಾಗವಾಯಿತು, ಜೆಡಿಎಸ್ ಹತ್ತಾರು ಬಾರಿ ಒಡೆಯಿತು. ಜನತಾ ಪರಿವಾರ ಇಲ್ಲದಾಗಿ ಹೋಯಿತು. ಆದರೆ ಸಿದ್ಧಾಂತ, ವಿಚಾರಧಾರೆಯ ಆಧಾರವನ್ನು ನಂಬಿ ಕಾರ್ಯ ನಿರ್ವಹಿಸುತ್ತಿರುವ ಬಿಜೆಪಿಯಲ್ಲಿ ಮಾತ್ರ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ಎರಡು ಬಾರಿ ಅಧಿಕಾರಕ್ಕೇರಿದ ಬಳಿಕವೂ ಯಾವುದೇ ರೀತಿ ಒಡಕು ಮೂಡಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಬಿಜೆಪಿ-ಕರ್ನಾಟಕ ಪ್ರಕೋಷ್ಟಗಳ ಚಿಂತನ ವರ್ಗ ಕಾರ್ಯಕ್ರಮವನ್ನು ನಗರದ ಕೊಡಿಯಾಲಬೈಲ್ ನಲ್ಲಿರುವ ರಮಣ ಪೈ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ವ್ಯಕ್ತಿ ನಿರ್ಮಾಣದಿಂದ ರಾಷ್ಟನಿರ್ಮಾಣದ ಕಾರ್ಯವನ್ನು ಜೋಡಿಸುವ ಕೆಲಸ ಮಾಡುತ್ತಿದೆ. ಈ ಮೂಲಕ ಚಿಂತನ ಪ್ರಕೋಷ್ಠದಲ್ಲಿ ವಿಚಾರ ಹಾಗೂ ಸಿದ್ಧಾಂತದ ನೆನಪು ಮಾಡುವ ಕಾರ್ಯ ಇದಾಗಿದೆ. ಈ ಮೂಲಕ ಸಾಮಾನ್ಯ ಕಾರ್ಯಕರ್ತನನ್ನು ನಾಯಕನನ್ನಾಗಿಸುವ ಗುರಿಯನ್ನು ಇರಿಸಲಾಗಿದೆ ಎಂದರು.
ನಾನು ರಾಜ್ಯಾಧ್ಯಕ್ಷ ನಾದ ಬಳಿಕ 16 ಸಾವಿರ ಮಂದಿ ಕಾರ್ಯಕರ್ತರು ಪ್ರಕೋಷ್ಠದೊಳಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. 52 ಸಾವಿರ ಮಂದಿ ಕಾರ್ಯಕರ್ತರ ಜೋಡಣೆಯಾಗಿದೆ. ಪ್ರಕೋಷ್ಠದಲ್ಲಿ 220 ಮಂದಿ ಉದ್ಯಮಿಗಳಿದ್ದು, ಇವರ ಮುಖೇನ 12,272 ಮಂದಿಗೆ ಉದ್ಯೋಗ ಲಭ್ಯವಾಗಿದೆ. ಇದೀಗ ದೇಶದಲ್ಲಿ ತುಷ್ಟೀಕರಣ ರಾಜಕೀಯ ಅಂತ್ಯಗೊಂಡು, ಧ್ಯೇಯ ಹಾಗೂ ದೇಶ ಚಿಂತಿತ ರಾಜಕಾರಣ ಆರಂಭಗೊಂಡಿದೆ. ನಮ್ಮದು ಕೆಸರೆರಚಾಟದ ರಾಜಕೀಯವಲ್ಲ. ಸಾಮಾಜಿಕ ಚಿಂತನೆ, ಸಮಾಜ ಸೇವೆ ಪರಿಕಲ್ಪನೆ, ಸೇವಾ ಹಿ ಸಂಘಟನೆ ಆಧಾರದಲ್ಲಿ ರಾಜಕಾರಣ ಮಾಡುವುದೇ ನಮ್ಮ ಗುರಿ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.
Kshetra Samachara
12/11/2021 05:32 pm