ಮಂಗಳೂರು: ಕೆಎಸ್ಆರ್ ಟಿಸಿಯಲ್ಲಿ ಉದ್ಯೋಗ ನಿರ್ವಹಿಸುತ್ತಾ ಸಾರಿಗೆ ಸಂಸ್ಥೆಯಲ್ಲಿ ಕನ್ನಡ ಕ್ರಿಯಾಶೀಲ ಸಮಿತಿಯನ್ನು ಸ್ಥಾಪಿಸಿ ಕನ್ನಡಿಗರಿಗೆ ಉದ್ಯೋಗ, ಆಡಳಿತದಲ್ಲಿ ಕನ್ನಡದ ಅನುಷ್ಠಾನಕ್ಕಾಗಿ ಹೋರಾಟ ನಡೆಸಿ ಯಶಸ್ವಿಯಾಗಿದ್ದೇನೆ. ಅಲ್ಲದೆ ಕಳೆದ ನಾಲ್ಕು ದಶಕಗಳಿಂದ ನಾಡು ನುಡಿಯ ಅನೇಕ ಚಳುವಳಿಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದ್ದೇನೆ. ಇದೀಗ ಕನ್ನಡದ ಕಾಯಕ ಮಾಡುವ ಆಶಯದಿಂದ ಕಸಪಾ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಸ್ಪರ್ಧಿಸಲಿದ್ದು ಎಲ್ಲರೂ ನನ್ನ ಗೆಲುವಿಗಾಗಿ ತಮ್ಮ ಅಮೂಲ್ಯ ಮತ ನೀಡಬೇಕೆಂದು ವ.ಚ.ಚೆನ್ನೇಗೌಡ ಮನವಿಮಾಡಿದರು.
ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಅವರು, ನನ್ನ ಹಲವಾರು ವರ್ಷಗಳ ಅನುಭವದಿಂದ ಕಸಪಾ ಸರ್ವ ಸದಸ್ಯರ ಸಹಕಾರ ಮಾರ್ಗದರ್ಶನದಿಂದ ಇದೀಗ ಕಸಪಾ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದು, ಎಲ್ಲರೂ ತಮ್ಮ ಅಮೂಲ್ಯ ಮತಗಳನ್ನು ನೀಡಿ ತನ್ನನ್ನು ಗೆಲ್ಲಿಸಬೇಕೆಂದು ಮತ ಯಾಚನೆ ಮಾಡಿದರು.
ಚುನಾವಣೆಯಲ್ಲಿ ಗೆದ್ದಲ್ಲಿ ಅನುಷ್ಠಾನ ಗೊಳಿಸುವ ಉದ್ದೇಶದಿಂದ ಸಾಕಷ್ಟು ಕಾರ್ಯ ಯೋಜನೆಗಳನ್ನು ಹಾಕಿಕೊಂಡಿದ್ದು, ಕನ್ನಡ ನಿಘಂಟನ್ನು ನಿರಂತರ ಪರಿಷ್ಕರಣಾ ಯೋಜನೆಯನ್ನು ಹಾಕಿಕೊಂಡಿದ್ದೇನೆ. ಕೇಂದ್ರ ಸರಕಾರ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಗಳನ್ನು ಪಡೆಯಲು ಸೂಕ್ತ ತರಬೇತಿ ಮಾರ್ಗದರ್ಶನಗಳ ಯೋಜನೆ ಹಾಕಿಕೊಳ್ಳಲಾಗಿದೆ. ರಾಜ್ಯದ ಗಡಿಗಳಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ ನಿರ್ದಿಷ್ಟ ಯೋಜನೆ ಹಾಕಿಕೊಳ್ಳಲಾಗಿದೆ. ಪರಿಷ್ಕೃತ ಡಾ.ಸರೋಜಿನಿ ಮಹಿಷಿ ವರದಿ ಅನುಷ್ಠಾನಕ್ಕೆ ಸರಕಾರಕ್ಕೆ ಒತ್ತಡ ತರಲಿದ್ದೇವೆ. ಈ ರೀತಿಯ ಅನೇಕ ಕಾರ್ಯಯೋಜನೆಗಳನ್ನು ಹಾಕಿಕೊಳ್ಳಲಾಗಿದೆ ಎಂದು ವ.ಚ.ಚೆನ್ನೇಗೌಡ ಹೇಳಿದರು.
Kshetra Samachara
27/10/2021 02:36 pm