ಪುತ್ತೂರು: ಕೆಸ್ಸಾರ್ಟಿಸಿ ನೌಕರರ ಮಾಸಿಕ ವೇತನ ಮತ್ತು ನಿವೃತ್ತ ನೌಕರರ ನಿವೃತ್ತಿ ಸೌಲಭ್ಯವನ್ನು ಪಾವತಿಸುಲ್ಲಿ ಸಂಸ್ಥೆಯ ಕೇಂದ್ರ ಕಚೇರಿಯ ಅಧಿಕಾರಿಗಳ ಧೋರಣೆಯನ್ನು ಖಂಡಿಸಿ ಪುತ್ತೂರು ವಿಭಾಗ ಕೆಸ್ಸಾರ್ಟಿಸಿ ಮಜ್ದೂರ್ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಮುಷ್ಕರ ಮೂರನೇ ದಿನಕ್ಕೆ ತಲುಪಿದ್ದು, ಶನಿವಾರ ಮುಷ್ಕರ ನಿರತರನ್ನು ಭೇಟಿ ಮಾಡಿದ ಶಾಸಕ ಸಂಜೀವ ಮಠಂದೂರು ಅವರು ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.
ಶನಿವಾರ ದ.ಕ.ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸಭೆಯು ಜಿಲ್ಲೆಯ 7 ಮಂದಿ ಶಾಸಕರ ಉಪಸ್ಥಿತಿಯಲ್ಲಿ ನಡೆಯಲಿದ್ದು ಕೆಸ್ಸಾರ್ಟಿಸಿ ನೌಕರರ ಸಮಸ್ಯೆಯ ಕುರಿತು ಚರ್ಚಿಸಿ ಸರ್ಕಾರದ ಗಮನಕ್ಕೆ ವಿಷಯ ತರುವುದಾಗಿ ಶಾಸಕ ಮಠಂದೂರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುತ್ತೂರು ವಿಭಾಗ ಕೆಎಸ್‌ಆರ್‌ಟಿಸಿ ಮಜ್ದೂರ್ ಸಂಘದ ಪ್ರಧಾನ ವಕ್ತಾರ ಶಾಂತರಾಮ ವಿಟ್ಲ, ಶುಕ್ರವಾರ ಕೇಂದ್ರ ಕಚೇರಿ ಹಾಗೂ ವಿಭಾಗದ ಮಟ್ಟದಲ್ಲಿ ಮೂರನೇ ಹಂತದ ಚರ್ಚೆ ನಡೆದಿದೆ. ನಮ್ಮಲ್ಲಿ ಸಾಕಷ್ಟು ಹಣ ಇಲ್ಲದ ಹಿನ್ನಲೆಯಲ್ಲಿ ವೇತನ ನೀಡಲು ಕಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾವು ಯಾವುದೇ ಬೇಡಿಕೆಯನ್ನು ಇಟ್ಟದ್ದಲ್ಲ. ನಾವು ಕೆಲಸ ಮಾಡಿದಕ್ಕೆ ನಮ್ಮ ಕೂಲಿ ನೀಡಿ ಎಂದು ನಾವು ಒತ್ತಾಯಿಸುತ್ತಿರುವುದು. ಸಂಸ್ಥೆಯ ವತಿಯಿಂದ ಯಾವುದೇ ಸ್ಪಂದನೆ ದೊರೆತಿಲ್ಲ. ಈ ಹಿನ್ನಲೆಯಲ್ಲಿ ಸೋಮವಾರದಿಂದ ಅಮರಣಾಂತ ಉಪವಾಸ ಕೈಗೊಳ್ಳಲಿದ್ದೇವೆ. ಧರಣಿ ಸತ್ಯಾಗ್ರಹ ಶನಿವಾರ ಸಂಜೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದರು.
Kshetra Samachara
23/10/2021 03:13 pm