ಬಂಟ್ವಾಳ: ಸುರತ್ಕಲ್‌ನಲ್ಲಿ ಇತ್ತೀಚೆಗೆ ನಡೆದಂತಹ ಕಾರ್ಯಕ್ರಮದಲ್ಲಿ ಭಾಷಣಗಾರ್ತಿ ಚೈತ್ರಾ ಕುಂದಾಪುರ ಅವರು ಜಿಲ್ಲೆಯಲ್ಲಿ ಶಾಂತಿ ಕೆಡಿಸುವಂತೆ ಭಾಷಣಗೈಯುವ ಮೂಲಕ ಜಿಲ್ಲೆಯಲ್ಲಿ ಧರ್ಮ- ಧರ್ಮದ ಹಾಗೂ ಜಾತಿ-ಜಾತಿಯ ಮಧ್ಯೆ ಸಂಘರ್ಷವನ್ನು ಉಂಟು ಮಾಡಿದಂತಾಗಿದೆ ಒಬ್ಬ ಮಹಿಳೆಯಾಗಿ ಒಂದು ಧರ್ಮದ ಮಹಿಳೆಯರನ್ನು ನಿಂದಿಸಿ ಅವರ ಧರ್ಮಕ್ಕೆ ಅಪಮಾನವಾಗುವಂತೆ ಪ್ರಚೋದನೆಗೈದ ಅವರ ನಿಲುವನ್ನು ಬಂಟ್ವಾಳ ಮತ್ತು ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಖಂಡಿಸಿದೆ.
ಮಂಗಳವಾರ ಬಿ.ಸಿ.ರೋಡಿನಲ್ಲಿರುವ ಪಕ್ಷದ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಜಯಂತಿ ಪೂಜಾರಿ ಹಾಗೂ ಲವೀನಾ ವಿಲ್ಮಾ ಮೊರಾಸ್ ಅವರು ಈ ತರಹದ ಮಾತುಗಳಿಂದ ಇಡೀ ಮಹಿಳಾ ಸಮುದಾಯ ತಲೆತಗ್ಗಿಸುವಂತಾಗಿದೆ ಎಂದರು.
ಈ ಜಿಲ್ಲೆಯಲ್ಲಿ ಎಲ್ಲಾ ಜಾತಿ, ಧರ್ಮ, ಭಾಷೆಯ ಜನರು ಸಹೋದರ ಸಹೋದರಿಯರಂತೆ ಬಾಳುತ್ತಿರುವುದಕ್ಕೆ ವಿಷ ಬೀಜ ಬಿತ್ತುವ ಕೆಲಸ ಮಾಡಿದ್ದಾರೆ. ಈ ಪ್ರಚೋದನಾ ಭಾಷಣದ ಹಿಂದೆ ಬಿಜೆಪಿ ಮುಖಂಡರು ಸಹಕಾರವನ್ನು ನೀಡುತ್ತಿರುವುದು ವಿಷಾದನೀಯ ಎಂದರು.
ಇನ್ನು ಮುಂದಕ್ಕೆ ಈ ಜಿಲ್ಲೆಯಲ್ಲಿ ಯಾವುದೇ ಸಮುದಾಯದ ಮಹಿಳೆಯರಿಗೆ ಅವಮಾನ ಮಾಡುವ ರೀತಿಯಲ್ಲಿ ಪ್ರಚೋದನಾ ಮಾತುಗಳನ್ನು ಆಡಿದ್ದಲ್ಲಿ ಇಡೀ ಮಹಿಳಾ ಸಮುದಾಯ ಪ್ರತಿಭಟನಾ ಮುಖಾಂತರ ಇಂತಹ ಅಸಭ್ಯ ನಡೆಯನ್ನು ತಡೆಯಲಾಗುವುದು ಎಂದು ಎಚ್ಚರಿಸಿದರು.
ಯಾವುದೇ ಸಂಘಟನೆಗಳು ಕಾನೂನು ಕೈಗೆತ್ತಿಕೊಂಡರೂ ಅದು ತಪ್ಪು ಇದನ್ನು ಮಹಿಳಾ ಕಾಂಗ್ರೆಸ್ ಖಂಡಿಸುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಅನೈತಿಕ ಪೋಲಿಸ್ ಗಿರಿಯಂತಹ ಘಟನೆಗಳು ಜಿಲ್ಲೆಯಲ್ಲಿ ಮರುಕಳಿಸದಂತೆ ಪೋಲಿಸ್ ಅಧಿಕಾರಿಗಳು ಎಚ್ಚರ ವಹಿಸುವಂತೆ ಒತ್ತಾಯಿಸಿದರಲ್ಲದೆ ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರ ತೇಜೋವಧೆಗೆ ಪ್ರಯತ್ನಿಸಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದರು. ಸುದ್ದಿಗೋಷ್ಠಿಯಲ್ಲಿ ಐಡಾ ಸುರೇಶ್ ಮಲ್ಲಿಕಾ ಪಕಳ, ಮಲ್ಲಿಕಾ ವಿ.ಶೆಟ್ಟಿ, ಧನಲಕ್ಷ್ಮೀಬಂಗೇರ, ಕಾಂಚಾಲಕ್ಷಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್,ಸುದೀಪ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
Kshetra Samachara
19/10/2021 09:58 pm